ಸಿನಿ ಸಾಹಿತಿ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ವಿಧಿವಶ sirivennela-sitaramasastri Saaksha tv
ಖ್ಯಾತ ಚಲನಚಿತ್ರ ಗೀತೆ ರಚನೆಕಾರ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಸಿಕಂದರಾಬಾದ್‍ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ಸಂಜೆ 4:07ಕ್ಕೆ ಇಹಲೋಕ ತ್ಯಜಿಸಿದ್ದಾರೆ.
ಸೀತಾರಾಮಶಾಸ್ತ್ರಿ ಅವರು 1986 ರಲ್ಲಿ ಸಿರಿವೆನ್ನೆಲ ಚಿತ್ರದ ಮೂಲಕ ಗೀತರಚನೆಕಾರರಾಗಿ ತೆಲುಗು ಪರದೆಯನ್ನು ಪ್ರವೇಶಿಸಿದರು. ಮೊದಲ ಚಿತ್ರದ ಹೆಸರನ್ನೇ ತಮ್ಮ ಮನೆತನದ ಹೆಸರನ್ನಾಗಿಸಿಕೊಂಡರು ಸಿರಿವೆನ್ನೆಲ ಸೀತಾರಾಮಶಾಸ್ತ್ರಿ. ಅಲ್ಲದೇ ಅವರು ಸಿರಿವೆನ್ನೆಲ ಚಿತ್ರಕ್ಕಾಗಿ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ ಪಡೆದುಕೊಂಡರು. ಹಾಗೇ ಶುರುವಾದ ಸೀತಾರಾಮಶಾಸ್ತ್ರಿಯವರ ಸಿನಿಮಾ ಪಯಣದಲ್ಲಿ ಹಲವಾರು ಅದ್ಭುತ ಹಾಡುಗಳಿವೆ.
2019 ರಲ್ಲಿ, ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತು. ಸ್ವರ್ಣ ಕಮಲಂ, ಗಾಯಂ, ಶುಭಲಗ್ನಂ, ಸಿಂಧೂರಂ, ಚಕ್ರಂ, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಮುಂತಾದ ಹಲವು ಚಿತ್ರಗಳಲ್ಲಿನ ತಮ್ಮ ಗೀತೆಗಳಿಗೆ ಸಿರಿವೆನ್ನೆಲ ನಂದಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಆರ್ ಆರ್ ಆರ್ ಚಿತ್ರದ ‘ದೋಸ್ತಿ’ ಹಾಡಿನ ಸಾಹಿತ್ಯ ಕೂಡ ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅವರದ್ದೆ.
ಇನ್ನು ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಮರಣದಿಂದಾಗಿ ತೆಲುಗು ಸಿನಿಮಾ ಇಂಡಸ್ಟ್ರೀ ಆಘಾತಕ್ಕೆ ಒಳಗಾಗಿದೆ. ಸಿನಿಮಾ ಗಣ್ಯರು ಸಿರಿವೆನ್ನೆಲ ಸೀತಾರಾಮಶಾಸ್ತ್ರಿ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.









