ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಇಬ್ರಾಹಿಂ ಜದ್ರಾನ್(98) ಹಾಗೂ ರಹಮತ್ ಶಾ(55) ಅವರ ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಶ್ರೀಲಂಕಾದ ಹಂಬಂಟೋಟದ ಮಹಿಂದ ರಾಜಪಕ್ಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡುವ ಅವಕಾಶ ಪಡೆದ ಶ್ರೀಲಂಕಾ, 50 ಓವರ್ಗಳಲ್ಲಿ 268 ರನ್ಗಳಿಗೆ ಆಲೌಟ್ ಆಯಿತು. ಈ ಟಾರ್ಗೆಟ್ ಚೇಸ್ ಮಾಡಿದ ಅಫ್ಘಾನಿಸ್ತಾನ 46.5 ಓವರ್ಗಳಲ್ಲಿ 4 ವಿಕೆಟ್ಗೆ 269 ರನ್ಗಳಿಸಿ ಗೆಲುವು ಸಾಧಿಸಿರು. ಆ ಮೂಲಕ ಅಫ್ಘಾನಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಲಿಲ್ಲ. ತಂಡದ ಮೊತ್ತ 100ರ ಗಡಿದಾಟುವ ಮೊದಲೇ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಕರುಣಾರತ್ನೆ(4), ಕುಸಲ್ ಮೆಂಡಿಸ್(11), ಮ್ಯಾಥ್ಯೂಸ್(12) ಅವರುಗಳನ್ನ ಕಳೆದುಕೊಂಡಿತು. ಆದರೆ ನಂತರದಲ್ಲಿ ಬಂದ ಅಸಲಂಕ(91 ರನ್, 95 ಬಾಲ್, 12 ಬೌಂಡರಿ) ಜವಾಬ್ದಾರಿಯ ಆಟದಿಂದ ತಂಡಕ್ಕೆ ಆಸರೆಯಾದರು. ಇವರಿಗೆ ಧನಂಜಯ ಡಿಸಿಲ್ವಾ(51), ಪತುಮ್ ನಿಸ್ಸಂಕ(38) ಉತ್ತಮ ಸಾಥ್ ನೀಡಿದರು. ಕೆಳ ಕ್ರಮಾಂಕದಲ್ಲಿ ಬಂದ ಬ್ಯಾಟರ್ಗಳು ಅಲ್ಪಮೊತ್ತದ ಕಾಣಿಕೆ ನೀಡಿದ ಪರಿಣಾಮ ನಿಗದಿತ 50 ಓವರ್ಗಳಲ್ಲಿ ಶ್ರೀಲಂಕಾ 268/10 ರನ್ಗಳಿಸಿತು. ಅಫ್ಘಾನಿಸ್ತಾನದ ಪರ ಫರೂಕಿ ಹಾಗೂ ಫರೀದ್ ಅಹ್ಮದ್ ತಲಾ 2 ವಿಕೆಟ್ ಪಡೆದರು.
ಅತಿಥೇಯ ಶ್ರೀಲಂಕಾ ನೀಡಿದ 269 ರನ್ಗಳ ಸವಾಲು ಬೆನ್ನತ್ತಿದ ಅಫ್ಘಾನಿಸ್ತಾನ ಸಹ ಆರಂಭದಲ್ಲೇ ರಹಮಾನುಲ್ಲ ಗುರ್ಬಾಜ್(14) ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಇಬ್ರಾಹಿಂ ಜದ್ರನ್(98 ರನ್, 98 ಬಾಲ್, 11 ಬೌಂಡರಿ, 2 ಸಿಕ್ಸ್) ಅತ್ಯುತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವಿನ ಹೀರೋ ಆದರು. ಇವರಿಗೆ ಉತ್ತಮ ಸಾಥ್ ನೀಡಿದ ರಹಮತ್ ಶಾ(55 ರನ್, 80 ಬಾಲ್, 3 ಬೌಂಡರಿ), ಹಜ್ಮತುಲ್ಲ ಶಹೀದಿ(38) ಜವಾಬ್ದಾರಿಯ ಆಟದಿಂದ ತಂಡಕ್ಕೆ ಗೆಲುವು ತಂದುಕೊಟ್ಟರು. ಲಂಕಾ ಪರ ಕಸುನ್ ರಜಿತ 2, ಲಹಿರು ಕುಮಾರ ಹಾಗೂ ಪತಿರಾನ 1 ವಿಕೆಟ್ ಪಡೆದರು.