ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ಜೆಮಿಮಾ ರೊಡ್ರಿಗಸ್ ಮೈದಾನದಲ್ಲಿ ಎಷ್ಟೇ ಅಬ್ಬರದ ಆಟವಾಡಿದರೂ, ಮೈದಾನದ ಹೊರಗೆ ಇವರಿಬ್ಬರು ಪ್ರಾಣ ಸ್ನೇಹಿತೆಯರು. ಇವರಿಬ್ಬರ ಸ್ನೇಹ ಎಂತಹದ್ದು ಎಂದರೆ ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಸದಾ ಹೆಗಲು ಕೊಟ್ಟು ನಿಲ್ಲುತ್ತಾರೆ. ಆದರೆ ಇದೀಗ ಈ ಇಬ್ಬರು ಸ್ನೇಹಿತೆಯರ ಬಾಂಧವ್ಯದ ನಡುವೆ ಧರ್ಮದ ವಿಷಯ ತೂರಿಕೊಂಡಿದ್ದು, ಕ್ರಿಸ್‌ಮಸ್ ಆಚರಣೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಟ್ರೋಲ್ ಗೆ ಕಾರಣವಾಗಿದೆ.
ಧರ್ಮ ಮೀರಿದ ಸ್ನೇಹಕ್ಕೆ ಕಲ್ಲು ಬಿದ್ದಿದ್ಯಾಕೆ?
ಜೆಮಿಮಾ ರೊಡ್ರಿಗಸ್ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಿದ್ದರೆ, ಸ್ಮೃತಿ ಮಂಧಾನ ಅಪ್ಪಟ ಹಿಂದೂ ಧರ್ಮದ ಸಂಪ್ರದಾಯಸ್ಥ ಕುಟುಂಬದಿಂದ ಬಂದವರು. ಹೀಗಿದ್ದರೂ ಇವರಿಬ್ಬರ ನಡುವಿನ ಸ್ನೇಹಕ್ಕೆ ಧರ್ಮ ಎಂದು ಅಡ್ಡ ಬಂದಿರಲಿಲ್ಲ. ಇತ್ತೀಚೆಗೆ ಸ್ಮೃತಿ ಮಂಧಾನ ಅವರ ವೈಯಕ್ತಿಕ ಜೀವನದಲ್ಲಿ ಉಂಟಾದ ಅಲ್ಲೋಲ ಕಲ್ಲೋಲದ ಸಮಯದಲ್ಲಿ, ಅಂದರೆ ಅವರ ಮದುವೆ ಮಾತುಕತೆ ಮುರಿದು ಬಿದ್ದ ಸಂದರ್ಭದಲ್ಲಿ ಸ್ಮೃತಿ ತೀವ್ರ ನೊಂದಿದ್ದರು. ಆ ಸಮಯದಲ್ಲಿ ಜೆಮಿಮಾ ತಮ್ಮ ಪ್ರತಿಷ್ಠಿತ ಬಿಗ್ ಬ್ಯಾಷ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನೇ ರದ್ದುಗೊಳಿಸಿ, ತಮ್ಮ ಗೆಳತಿಯ ಮಾನಸಿಕ ಬೆಂಬಲಕ್ಕಾಗಿ ಜೊತೆಗೆ ನಿಂತಿದ್ದರು. ಇದು ಅವರ ಗಾಢ ಸ್ನೇಹಕ್ಕೆ ಸಾಕ್ಷಿಯಾಗಿತ್ತು.
ತಿರುವನಂತಪುರಂನಲ್ಲಿ ಸಾಂತಾ ಟೋಪಿ ಧರಿಸಿ ಸಂಭ್ರಮ
ಪ್ರಸ್ತುತ ಭಾರತ ಮಹಿಳಾ ತಂಡವು ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಸಜ್ಜಾಗುತ್ತಿದೆ. ಇದರ ಭಾಗವಾಗಿ ತಂಡವು ತಿರುವನಂತಪುರಂನಲ್ಲಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಜೆಮಿಮಾ ರೊಡ್ರಿಗಸ್ ಹೋಟೆಲ್ ನಲ್ಲಿ ಸಂಭ್ರಮಾಚರಣೆ ಏರ್ಪಡಿಸಿದ್ದರು. ಈ ವೇಳೆ ಜೆಮಿಮಾ ಅವರೊಂದಿಗೆ ಸ್ಮೃತಿ ಮಂಧಾನ ಹಾಗೂ ಮತ್ತೋರ್ವ ಆಟಗಾರ್ತಿ ಅರುಂಧತಿ ರೆಡ್ಡಿ ಕೂಡ ಸಾಂತಾ ಕ್ಲಾಸ್ ಟೋಪಿ ಧರಿಸಿ ಸಂಭ್ರಮಿಸಿದ್ದಾರೆ. ನಗುತ್ತಾ ಪೋಸ್ ನೀಡಿರುವ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ವಿವಾದದ ಕಿಡಿ ಹೊತ್ತಿಕೊಂಡಿದೆ.
ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?
ಈ ಫೋಟೋ ನೋಡಿದ ಹಲವು ನೆಟಿಜನ್ ಗಳು ಸ್ಮೃತಿ ಮಂಧಾನ ಅವರ ನಡೆಯನ್ನು ಪ್ರಶ್ನಿಸಿ ಟ್ರೋಲ್ ಮಾಡಲು ಶುರುಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಇತ್ತೀಚೆಗೆ ಭಾರತ ತಂಡದ ಆಟಗಾರ್ತಿಯರು ಆಂಧ್ರಪ್ರದೇಶದ ಪ್ರಸಿದ್ಧ ದೇವಾಲಯವೊಂದಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ತಂಡದ ಹಲವು ಸದಸ್ಯರು ದೇವಸ್ಥಾನಕ್ಕೆ ಹೋಗಿದ್ದರಾದರೂ, ಜೆಮಿಮಾ ರೊಡ್ರಿಗಸ್ ಮಾತ್ರ ಅಲ್ಲಿ ಕಾಣಿಸಿಕೊಂಡಿರಲಿಲ್ಲ. ಜೆಮಿಮಾ ಅವರು ಅನ್ಯ ಧರ್ಮೀಯರಾದ ಕಾರಣ ಹಿಂದೂ ದೇವಾಲಯಕ್ಕೆ ಅಥವಾ ಹಿಂದೂ ಹಬ್ಬಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ ಎಂಬುದು ನೆಟ್ಟಿಗರ ವಾದ.
ಹಾಗಿದ್ದ ಮೇಲೆ, ಸ್ಮೃತಿ ಮಂಧಾನ ಮಾತ್ರ ಕ್ರಿಶ್ಚಿಯನ್ ಹಬ್ಬವಾದ ಕ್ರಿಸ್‌ಮಸ್ ಅನ್ನು ಆಚರಿಸುವುದು, ಸಾಂತಾ ಟೋಪಿ ಧರಿಸುವುದು ಎಷ್ಟು ಸರಿ? ಎಂದು ಕೆಲವರು ಪ್ರಶ್ನಿಸಿದ್ದಾರೆ. ಭಾರತದಲ್ಲಿ ಜಾತ್ಯತೀತತೆ ಅಥವಾ ಸೆಕ್ಯುಲರಿಸಂ ಎಂಬುದು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವೇ? ಹಿಂದೂಗಳು ಎಲ್ಲರ ಹಬ್ಬವನ್ನೂ ಆಚರಿಸಬೇಕು, ಆದರೆ ಅನ್ಯ ಧರ್ಮೀಯರು ಹಿಂದೂ ಆಚರಣೆಗಳಿಂದ ದೂರ ಉಳಿಯುತ್ತಾರೆ. ಇದ್ಯಾವ ನ್ಯಾಯ? ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರುತ್ತಿದ್ದಾರೆ.
ಒಟ್ಟಿನಲ್ಲಿ, ಮೈದಾನದ ಹೊರಗಿನ ವೈಯಕ್ತಿಕ ಸ್ನೇಹ ಮತ್ತು ಆಚರಣೆಗಳು ಇದೀಗ ಧರ್ಮದ ಕನ್ನಡಕದಲ್ಲಿ ನೋಡುವಂತಾಗಿದ್ದು, ಸ್ಮೃತಿ ಮತ್ತು ಜೆಮಿಮಾ ಅವರ ಕ್ರಿಸ್‌ಮಸ್ ಫೋಟೋ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.







