ಉತ್ತರಾಖಂಡದಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಕೇದಾರನಾಥ ದೇವಾಲಯ ಪ್ರದೇಶದಲ್ಲಿನ ಪರ್ವತಗಳಲ್ಲಿ ಗುರುವಾರ ಭಾರಿ ಹಿಮಕುಸಿತ ಉಂಟಾಗಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಜೂನ್ 4 ರಂದು ರಾಜ್ಯದಲ್ಲಿ ಇದೇ ರೀತಿ ಹಿಮ ಕುಸಿತ ಉಂಟಾಗಿತ್ತು. ಹೇಮಕುಂಡ್ ಸಾಹಿಬ್ ತೆರಳುತ್ತಿದ್ದ ಯಾತ್ರಾರ್ಥಿಗಳ ಗುಂಪಿಗೆ ಅಪ್ಪಳಿಸಿತು. ಅವರಲ್ಲಿ ಐವರನ್ನು ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್ಡಿಆರ್ಎಫ್) ತಂಡ ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಂಡ ನಂತರ ಜೂನ್ 5 ರಂದು ಯಾತ್ರಿಗಳ ಮೃತದೇಹ ಹೊರತೆಗೆಯಲಾಯಿತು.
ಈ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಗೆ ಆಫ್ ಲೈನ್ ನೋಂದಣಿಯನ್ನು ಜೂನ್ 10 ರವರೆಗೆ ಮತ್ತು ಆನ್ಲೈನ್ ನೋಂದಣಿಯನ್ನು ಜೂನ್ 15 ರವರೆಗೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ನೋಂದಣಿ ಮಾಡಿಕೊಂಡಿರುವ ಭಕ್ತರು ಧಾಮಕ್ಕೆ ಭೇಟಿ ನೀಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿಯವರೆಗೆ 41 ಲಕ್ಷ ಭಕ್ತರು ಚಾರ್ಧಾಮ್ ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಪ್ರವಾಸೋದ್ಯಮ ಇಲಾಖೆ ಹೇಳಿಕೆಯಂತೆ, ಹವಾಮಾನ ಅನುಕೂಲಕರವಾದಾಗ ಪ್ರತಿನಿತ್ಯ 60 ಸಾವಿರಕ್ಕೂ ಅಧಿಕ ಯಾತ್ರಿಕರು ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳಿಗೆ ಭೇಟಿ ನೀಡುತ್ತಿದ್ದಾರೆ.