ಅತ್ತೆಯನ್ನು ಬರ್ಬವಾಗಿ ಹತ್ಯೆ ಮಾಡಿದ ಅಳಿಯನಿಗೆ ಜೀವಾವಧಿ ಶಿಕ್ಷೆ
ದಾವಣಗೆರೆ: ಅತ್ತೆಯನ್ನು ಮಚ್ಚಿನಿಂದ ಬರ್ಬವಾಗಿ ಕೊಲೆ ಮಾಡಿದ ಆರೋಪಿಗೆ ಇಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿದೆ.
ದಾವಣಗೆರೆ ನಗರದ ಹೊಂಡದ ಸರ್ಕಲ್ನ ಅಭಿರಾಜ್ ಕೊಲೆ ಮಾಡಿದ ಅಪರಾಧಿ. ಅತ್ತೆ ಭಾಗ್ಯಮ್ಮ ಕೊಲೆಯಾಗಿದ್ದ ಮಹಿಳೆ. 2019 ರ ಜುಲೈ 18 ರಂದು ಭಾಗ್ಯಮ್ಮಳನ್ನು ಆಸ್ತಿ ಆಸೆಗೆ ಅಭಿರಾಜ್ ಕೊಲೆ ಮಾಡಿದ್ದನು. ಈ ಪ್ರಕರಣ ಇನ್ನೂ ನ್ಯಾಯಾಲಯದ ಮುಂದೆ ಇತ್ತು. ಅಭಿರಾಜ್ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಕೊಟ್ಟಿದ್ದು, ಈ ಕೇಸ್ಗೆ ಅಂತ್ಯ ಕಂಡಿದೆ.
ನಡೆದಿದ್ದು : ಭಾಗ್ಯಮ್ಮ ಅವರು 14 ವರ್ಷಗಳ ಹಿಂದೆ ದಾವಣಗೆರೆಯ ಶಿವಕುಮಾರ್ ಅವರನ್ನು ಮದುವೆಯಾಗಿದ್ದರು. ಶಿವಕುಮಾರ್ ಕುಡಿತದ ದಾಸನಾಗಿ ಐದು ವರ್ಷಗಳ ಹಿಂದೆ ತೀರಿಹೋಗಿದ್ದ. ಈ ದಂಪತಿಗಳಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಭಾಗ್ಯಮ್ಮ ಮಗಳನ್ನು ತನ್ನ ಅಕ್ಕನ ಮನೆಯಲ್ಲಿ ಬಿಟ್ಟು, ತಾನು ಗಂಡನ ಮೆನಯಲ್ಲಿ ಒಬ್ಬಳೇ ವಾಸವಾಗಿದ್ದಳು.
ಶಿವಕುಮಾರ್ ಅಕ್ಕನ ಮಗನಾದ ಅಭಿರಾಜ್, (ವರಸೆಯಲ್ಲಿ ಭಾಗ್ಯಮ್ಮಳಿಗೆ ಅಳಿಯ) ಭಾಗ್ಯಮ್ಮ ನ ಅವರ ಹಿಂದಿನ ಮನೆಯಲ್ಲೇ ವಾಸವಾಗಿದ್ದ. ಭಾಗ್ಯಮ್ಮ ವಾಸವಿರುವ ಮನೆಯನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಎಂಬ ಆಸೆಯಿಂದ ಆಗಾಗ ಭಾಗ್ಯಮ್ಮಳಿಗೆ ಕಿರುಕುಳ ನೀಡುತ್ತಿದ್ದ.
ಅಲ್ಲದೇ ಭಾಗ್ಯಮ್ಮ ಮನೆಗೆ ಬೇರೆ-ಬೇರೆ ಗಂಡಸರು ಬಂದು ಹೋಗುತ್ತಿದ್ದಾರೆ ಎಂದು ಆಕೆಯ ತಾಯಿ ಹಾಗೂ ಅಣ್ಣನಿಗೆ ಚಾಡಿ ಹೇಳುತ್ತಿದ್ದ. 2019ರ ಜುಲೈ 18 ರಂದು ರಾತ್ರಿ ಅಭಿರಾಜ್ ಮನೆಗೆ ಬಂದಾಗ ತನ್ನ ಬಗ್ಗೆ ಚಾಡಿ ಹೇಳುತ್ತಿರುವುದನ್ನು ಭಾಗ್ಯಮ್ಮ ಪ್ರಶ್ನಿಸಿದ್ದಾರೆ. ಈಕೆಯನ್ನು ಸುಮ್ಮನೆ ಬಿಟ್ಟರೆ ತನಗೆ ಆಸ್ತಿ ಸಿಗುವುದಿಲ್ಲ ಎಂದು ಅಭಿರಾಜ್ ಮಚ್ಚಿನಿಂದ ಭಾಗ್ಯಮ್ಮ ಅವರನ್ನು ಕೊಲೆ ಮಾಡಿದ್ದ.
ಈ ಪರಿಣಾಮ ಅಂದಿನ ಸಿಪಿಐ ಉಮೇಶ್ ಜಿ.ಬಿ.ತನಿಖೆ ನಡೆಸಿ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೆ.ವಿ.ವಿಜಯಾನಂದ ಅವರು ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ ವಾದ ಮಂಡಿಸಿದ್ದರು.