ಅಡುಗೆ ಮಾಡಿಲ್ಲವೆಂದು ತಾಯಿಯನ್ನು ಕೊಂದ ಮಗ
ಮೈಸೂರು: ಅಡುಗೆ ಮಾಡಿಲ್ಲವೆಂದು ಮಗ ಕೋಪಗೊಂಡು ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ.
ಜಯಮ್ಮ (54) ಮೃತಪಟ್ಟ ದುರ್ದೈವಿ. ಮಗ ಹರೀಶ್ ಕೊಲೆ ಆರೋಪಿ. ತಾಯಿ ಅಡುಗೆ ಮಾಡಿಲ್ಲವೆಂದು ಮಗ ತಾಯಿಯ ಕಪಾಳಕ್ಕೆ ಹೊಡೆದಿದ್ದಾನೆ. ಹೊಡೆತಕ್ಕೆ ತಾಯಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಪ್ರಕರಣ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ಹರೀಶನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಡೆದಿದ್ದೇನು: ಮಹದೇವಸ್ವಾಮಿ ಮತ್ತು ಜಯಮ್ಮ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ತಾಯಿ ಜಯಮ್ಮ ಮದ್ಯ ವ್ಯಸನಿಯಾಗಿದ್ದು, ಈ ಸಂಬಂಧ ಮನೆಯಲ್ಲಿ ಆಗಾಗ ಮಕ್ಕಳು ಮತ್ತು ತಾಯಿ ನಡುವೆ ಜಗಳವಾಗುತ್ತಿತ್ತು. ಜಯಮ್ಮ ಶನಿವಾರ ಕೂಡ ಹಗಲಿನಲ್ಲೇ ಮದ್ಯೆ ಸೇವಿಸಿದ್ದಾಳೆ. ಇದರಿಂದ ಆಕೆ ಅಡುಗೆ ಸಹಿತ ಮಾಡಿರಲಿಲ್ಲ.
ಮಗ ಹರೀಶ ಚಾಲಕನಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ತಾಯಿ ಅಡುಗೆ ಮಾಡಿಲ್ಲವೆಂದು ಕೋಪಗೊಂಡು ತಾಯಿಯ ಕಪಾಳಕ್ಕೆ ಹೊಡೆದಿದ್ದಾನೆ. ಇದರಿಂದ ಜಯಮ್ಮ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮೃತಳ ಪುತ್ರಿ, ತನ್ನ ಸಹೋದರನೇ ತಾಯಿಯನ್ನು ಕೊಲೆ ಮಾಡಿದ್ದಾರೆ ಎಂದು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಇನ್ಸ್‌ಪೆಕ್ಟರ್ ರವಿಕುಮಾರ್ ಪ್ರಕರಣ ದಾಖಲಿಸಿಕೊಂಡು ಹರೀಶ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.