ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಒಂದೇ ದಿನದಲ್ಲಿ ಎರಡು ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದಾರೆ. ಒಂದೆಡೆ, ತಮ್ಮ ಮೇಲಿನ ಅಭಿಮಾನಕ್ಕೆ ಶಾಸಕರೊಬ್ಬರ ಮಗನಿಗೆ ತಮ್ಮದೇ ಹೆಸರಿಟ್ಟು ರಾಜಕೀಯ ನಿಷ್ಠೆಯ ಸಂಕೇತವಾದರೆ, ಇನ್ನೊಂದೆಡೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಸ್ಮರಿಸಿ ಪಕ್ಷದ ಸಿದ್ಧಾಂತ ಮತ್ತು ಇತಿಹಾಸವನ್ನು ಮೆಲುಕು ಹಾಕಿದರು.
ಶಾಸಕರ ಪುತ್ರನಿಗೆ ‘ಶಿವಕುಮಾರ್’ ಎಂದು ನಾಮಕರಣ
ಬೆಳಗಾವಿ ಜಿಲ್ಲೆಯ ಕುಡಚಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣನವರ್ ಅವರು ತಮ್ಮ ನವಜಾತ ಗಂಡು ಮಗುವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕೈಯಿಂದಲೇ ನಾಮಕರಣ ಮಾಡಿಸುವ ಮೂಲಕ ತಮ್ಮ ನಾಯಕನ ಮೇಲಿನ ಅಭಿಮಾನವನ್ನು ವಿಶಿಷ್ಟವಾಗಿ ಮೆರೆದಿದ್ದಾರೆ. ಬೆಂಗಳೂರಿನಲ್ಲಿರುವ ಡಿಕೆಶಿ ಅವರ ಗೃಹಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಡಿಕೆಶಿ ಅವರು ಮಗುವಿನ ಕಿವಿಯಲ್ಲಿ ಮೂರು ಬಾರಿ ‘ಶಿವಕುಮಾರ್, ಶಿವಕುಮಾರ್, ಶಿವಕುಮಾರ್…’ ಎಂದು ಹೇಳಿ ನಾಮಕರಣ ನೆರವೇರಿಸಿದರು.
ಈ ಸಂತಸದ ಕ್ಷಣವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್, “ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ! ನನ್ನ ಗೃಹಕಚೇರಿಯಲ್ಲಿಂದು ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರ ಮಗನಿಗೆ “ಶಿವಕುಮಾರ್” ಎಂದು ನಾಮಕರಣ ಮಾಡುವ ಭಾಗ್ಯ ನನ್ನದಾಯಿತು. ನನ್ನ ಹೆಸರನ್ನು ಮಗುವಿಗೆ ಇಡಲು ನಿರ್ಧರಿಸಿದ ಶಾಸಕರ ಈ ನಡೆಗೆ ನಾನು ಧನ್ಯ!” ಎಂದು ಬರೆದುಕೊಂಡಿದ್ದಾರೆ.
ಮಗುವನ್ನು ಹರಸುತ್ತಾ, “ಮುಂದಿನ ದಿನಗಳಲ್ಲಿ ಈ ಮುದ್ದಾದ ಮಗು ನನಗಿಂತಲೂ ಎತ್ತರಕ್ಕೆ ಬೆಳೆಯಲಿ, ತಂದೆ-ತಾಯಿಗಳಿಗೆ ಒಳ್ಳೆಯ ಹೆಸರು ತರುವಂತಾಗಲಿ. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ, ಈ ‘ಶಿವಕುಮಾರ’ ಕರುನಾಡ ಬೆಳಗುವ ಕುವರನಾಗಲಿ,” ಎಂದು ಮನದುಂಬಿ ಹಾರೈಸಿದ್ದಾರೆ.
ಇಂದಿರಾ ಸ್ಮರಣೆ: ಬಡವರ ಧ್ವನಿ, ದೇಶದ ಶಕ್ತಿ
ಬೆಂಗಳೂರಿನ ಜೆ.ಪಿ. ನಗರದ ಸಾರಕ್ಕಿಯಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಇಂದಿರಾ ಗಾಂಧಿಯವರನ್ನು “ದೇಶದ ಪ್ರತಿಯೊಬ್ಬ ಬಡವರ ಉಸಿರು” ಎಂದು ಬಣ್ಣಿಸಿದರು. ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿಗಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಹುತಾತ್ಮ ಅವರು ಎಂದು ಸ್ಮರಿಸಿದರು.
ಉಳುವವನೇ ಭೂಮಿಯ ಒಡೆಯ: ಐತಿಹಾಸಿಕ ಭೂಕ್ರಾಂತಿ
ಇಂದಿರಾ ಗಾಂಧಿಯವರ ಆಡಳಿತಾವಧಿಯಲ್ಲಾದ ಕ್ರಾಂತಿಕಾರಕ ಬದಲಾವಣೆಗಳನ್ನು ನೆನಪಿಸಿಕೊಂಡ ಡಿಕೆಶಿ, “ಬಡತನ ನಿವಾರಣೆಗೆ ಅವರು ದಿಟ್ಟ ನಿರ್ಧಾರಗಳನ್ನು ಕೈಗೊಂಡರು. ಅವರ ‘ಉಳುವವನೇ ಭೂಮಿಯ ಒಡೆಯ’ ಯೋಜನೆಯನ್ನು ಕರ್ನಾಟಕದಲ್ಲಿ ದೇವರಾಜ ಅರಸು ಅವರು ಯಶಸ್ವಿಯಾಗಿ ಜಾರಿಗೆ ತಂದರು. ಇದರಿಂದ ಲಕ್ಷಾಂತರ ಬಡ ರೈತರು ಭೂಮಿಯ ಮಾಲೀಕರಾದರು. ಪ್ರತಿ ತಾಲ್ಲೂಕಿನಲ್ಲಿ ಸಾವಿರಾರು ರೈತರು ಇದರ ಫಲಾನುಭವಿಗಳಾದರು. ಇಡೀ ದೇಶದಲ್ಲೇ ಇಂತಹ ಭೂಕ್ರಾಂತಿ ಬೇರೆಲ್ಲೂ ಆಗಿಲ್ಲ,” ಎಂದರು.
ಬ್ಯಾಂಕ್ ರಾಷ್ಟ್ರೀಕರಣ ಮತ್ತು ಸಾಲ ಮೇಳದ ಶಕ್ತಿ
ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ್ದರಿಂದ ಜನಸಾಮಾನ್ಯರ ಬದುಕಿಗೆ ಹೇಗೆ ನೆರವಾಯಿತು ಎಂಬುದನ್ನು ವಿವರಿಸಿದ ಅವರು, “ಸಣ್ಣ ಆರ್ಥಿಕ ನೆರವಿಗೂ ಪರದಾಡುತ್ತಿದ್ದ ಜನರಿಗೆ ಬ್ಯಾಂಕ್‌ಗಳಲ್ಲಿ ಸಾಲ ಸಿಗುವಂತಾಯಿತು. ಈ ನಿರ್ಧಾರದಿಂದಲೇ ಕೇಂದ್ರ ಸಚಿವರಾಗಿದ್ದ ಜನಾರ್ಧನ ಪೂಜಾರಿಯವರು ಸಾಲ ಮೇಳಗಳನ್ನು ಏರ್ಪಡಿಸಿ, ರಸ್ತೆಬದಿ ವ್ಯಾಪಾರಿಗಳಿಂದ ಹಿಡಿದು ಎಲ್ಲರಿಗೂ 5 ರಿಂದ 10 ಸಾವಿರದವರೆಗೆ ಸಾಲ ನೀಡಿ ಆರ್ಥಿಕ ಕ್ರಾಂತಿಗೆ ಕಾರಣರಾದರು. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ನಾನು, ನನ್ನ ಕ್ಷೇತ್ರದಲ್ಲಿ ಸಾಲಮೇಳ ಏರ್ಪಡಿಸಿ ಜನರ ವಿಶ್ವಾಸ ಗಳಿಸಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬಂದೆ,” ಎಂದು ತಮ್ಮ ರಾಜಕೀಯ ಜೀವನದ ಘಟನೆಯನ್ನು ನೆನಪಿಸಿಕೊಂಡರು.
ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಮೊಣಕಾಲ್ಮೂರು ಬಳಿ ನಡೆದ ಘಟನೆಯನ್ನು ಉಲ್ಲೇಖಿಸಿ, “ಓರ್ವ ಅಜ್ಜಿ, ‘ನಿಮ್ಮ ಅಜ್ಜಿ (ಇಂದಿರಾ ಗಾಂಧಿ) ನೀಡಿದ ಭೂಮಿಯಲ್ಲಿ ಬೆಳೆದ ಸೌತೆಕಾಯಿ ಇದು’ ಎಂದು ರಾಹುಲ್ ಗಾಂಧಿ ಅವರಿಗೆ ನೀಡಿ ಆಶೀರ್ವದಿಸಿದರು. ಇದು ಕಾಂಗ್ರೆಸ್ ಪಕ್ಷ ಮತ್ತು ಇಂದಿರಾ ಗಾಂಧಿಯವರಿಂದ ಮಾತ್ರ ಸಾಧ್ಯವಾಯಿತು,” ಎಂದು ಹೇಳಿದರು.
ಅಂಗನವಾಡಿ, ವಿಧವಾ ವೇತನ ಮತ್ತು ವೃದ್ಧಾಪ್ಯ ಪಿಂಚಣಿಯಂತಹ ಸಾಮಾಜಿಕ ಯೋಜನೆಗಳನ್ನು ದೇಶಕ್ಕೆ ನೀಡಿದ್ದು ಇಂದಿರಾ ಗಾಂಧಿ. 50 ವರ್ಷಗಳ ಹಿಂದೆಯೇ ಅವರು ಮಕ್ಕಳ ಪೌಷ್ಟಿಕತೆ ಮತ್ತು ಪ್ರಾಥಮಿಕ ಶಿಕ್ಷಣದ ಬಗ್ಗೆ ಯೋಚಿಸಿ ಅಂಗನವಾಡಿ ಯೋಜನೆ ಜಾರಿಗೆ ತಂದರು. ಆ ಯೋಜನೆಗಳನ್ನು ಇಂದಿಗೂ ಯಾವುದೇ ಸರ್ಕಾರ ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ಪಕ್ಷದ ಕೊಡುಗೆಗಳನ್ನು ಶ್ಲಾಘಿಸಿದರು.








