ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ತನಿಖೆ ನಡೆಯುತ್ತಿರುವಾಗಲೇ ಮುಂಬೈ ಡ್ರಗ್ಸ್ ಮಾಫಿಯಾ ಜಾಲಕ್ಕೂ ಬೆಂಗಳೂರಿಗೂ ನಂಟಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಾರ್ಡ್ನ ಕಾಂಗ್ರೆಸ್ ಕಾರ್ಪೋರೇಟರ್ ಕೇಶವಮೂರ್ತಿ ಪುತ್ರ ಯಶಸ್ಗೆ ಮುಂಬೈ ಡ್ರಗ್ಸ್ ಜಾಲದ ನಂಟಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲರ್ ಬ್ಯೂರೋ)ಅಧಿಕಾರಿಗಳ ತಂಡ ಕಾರ್ಪೋರೇಟರ್ ಕೇಶವಮೂರ್ತಿ ಮನೆ ಮೇಲೆ ದಾಳಿ ನಡೆಸಿ ಪುತ್ರ ಯಶಸ್ಗೆ ನೋಟಿಸ್ ನೀಡಿದೆ.
ಎರಡು ದಿನಗಳ ಹಿಂದೆ ರಾಜಾಜಿನಗರದಲ್ಲಿರುವ ಕೇಶವಮೂರ್ತಿ ಮನೆ ಮೇಲೆ ದಾಳಿ ಮಾಡಿದ್ದ ಎನ್ಸಿಬಿ ತಂಡ, ಮನೆಯಲ್ಲಿ ತೀವ್ರ ಶೋಧ ನಡೆಸಿತ್ತು. ದಾಳಿ ವೇಳೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ಮುಂಬೈ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಎನ್ಸಿಬಿ ಅಧಿಕಾರಿಗಳು ನೋಟಿಸ್ ನೀಡಿ ತೆರಳಿದ್ದಾರೆ.
ಕಾರ್ಪೋರೇಟರ್ ಪುತ್ರ ಯಶಸ್, ಮುಂಬೈ ಡ್ರಗ್ ಪೆಡ್ಲರ್ ಮಹಮ್ಮದ್ ಜತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಮಹಮ್ಮದ್, ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನಂತೆ. ಮಹಮ್ಮದ್ನ ವಿಚಾರಣೆ ವೇಳೆ ಯಶಸ್ನ ಹೆಸರು ಹೇಳಿರುವುದು ಮುಂಬೈಗೂ-ಬೆಂಗಳೂರಿಗೂ ಡ್ರಗ್ಸ್ ನಂಟು ದಟ್ಟವಾಗಿದೆ.
ಇತ್ತೀಚೆಗೆ ಪದವಿ ಮುಗಿಸಿದ್ದ ಯಶಸ್, ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದನಂತೆ. ಯಶಸ್ ತನ್ನ ಸ್ನೇಹಿತರಿಗೂ ಡ್ರಗ್ಸ್ ನೀಡುತ್ತಿರುವ ಬಗ್ಗೆ ಎನ್ಸಿಬಿ ತಂಡಕ್ಕೆ ಅನುಮಾನ ಬಂದಿದೆ. ಹೀಗಾಗಿ ಆತನ ಸ್ನೇಹಿತರಿಗೂ ಎನ್ಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಂಬೈ ಡ್ರಗ್ಸ್ ಮಾಫಿಯಾ ಟೀಂ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿರುವ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
*****************************