ಕನ್ನಡತಿಯ ಅದ್ಭುತ ಬೌಲಿಂಗ್ ನಿಂದಾಗಿ ಮಹಿಳಾ ಉದಯೋನ್ಮುಖ ಟಿ20 ಏಷ್ಯಾ ಕಪ್ 2023ರಲ್ಲಿ ಭಾರತ ಎ ತಂಡವು ಹಾಂಗ್ ಕಾಂಗ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಹಾಂಗ್ ಕಾಂಗ್ ತಂಡ ನೀಡಿದ್ದ 35 ರನ್ ಗಳ ಸಾಧಾರಣ ಗುರಿ ಬೆನ್ನಟ್ಟಿದ್ದ ಭಾರತ ಎ ತಂಡ 88 ಎಸೆತಗಳು ಬಾಕಿ ಇರುವಂತೆಯೇ 9 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಪಾಕಿಸ್ತಾನ ಎ ಮತ್ತು ನೇಪಾಳ ಸೇರಿದಂತೆ ಇತರ ಎರಡು ತಂಡಗಳನ್ನು ಒಳಗೊಂಡಿರುವ ಎ ಗುಂಪಿನಲ್ಲಿ ಭಾರತ ಎ ತಂಡ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ತನ್ನ ಖಾತೆ ಆರಂಭಿಸಿತು.
ಟಾಸ್ ಗೆದ್ದ ಭಾರತ ಎ ತಂಡದ ನಾಯಕಿ ಶ್ವೇತಾ ಸೆಹ್ರಾವತ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಎ ತಂಡದ ಮಹಿಳಾ ಬೌಲರ್ ಗಳು ಪವರ್ ಪ್ಲೇಯಿಂದಲೇ ಎದುರಾಳಿ ತಂಡದ ವಿಕೆಟ್‌ಗಳನ್ನು ಪಡೆದರು. ಹಾಂಗ್‌ಕಾಂಗ್ ತಂಡವನ್ನು 14 ಓವರ್‌ಗಳಲ್ಲಿ 34 ರನ್‌ಗಳ ಅಲ್ಪ ರನ್ ಗಳಿಗೆ ಕಟ್ಟಿ ಹಾಕಿದರು. 3 ಓವರ್‌ಗಳ ಕೋಟಾದಲ್ಲಿ ಕೇವಲ ಎರಡು ರನ್ ಗಳನ್ನು ನೀಡಿ 5 ವಿಕೆಟ್‌ಗಳನ್ನು ಪಡೆದು ಸ್ಟಾರ್ ಬೌಲರ್ ಎನಿಸಿದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಭಾರತ ಎ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಮನ್ನತ್ ಕಶ್ಯಪ್ ಮತ್ತು ಪಾರ್ಶವಿ ಚೋಪ್ರಾ ತಲಾ ಎರಡು ವಿಕೆಟ್ ಪಡೆದರೆ, ಟಿಟಾಸ್ ಸಧು 1 ವಿಕೆಟ್ ಪಡೆದರು. ಸುಲಭ ಗುರಿ ಬೆನ್ನಟ್ಟಿದ ಭಾರತ ಎ ತಂಡ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ನಾಯಕಿ ಶ್ವೇತಾ ಸೆಹ್ರಾವತ್ ಅವರ ವಿಕೆಟ್ ಕಳೆದುಕೊಂಡಿತು. ಗೊಂಗಡಿ ತ್ರಿಶಾ ಅವರು ಯು ಚೆಟ್ರಿಯೊಂದಿಗೆ ಸೇರಿಕೊಂಡು 34 ರನ್ ಗಳ ಗುರಿಯನ್ನು ನಿರಾಯಾಸವಾಗಿ ತಲುಪಿಸಿದರು. ಭಾರತ ಎ ತಂಡವು ಹಾಂಗ್‌ಕಾಂಗ್‌ನಲ್ಲಿ ನಡೆಯುತ್ತಿರುವ 2023ರ ಉದಯೋನ್ಮುಖ ಏಷ್ಯಾ ಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಶುಭಾರಂಭ ಮಾಡಿತು.







