ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ಕಡಿಮೆ. ಈ ಕೊರತೆಯ ಮಧ್ಯೆ ಶ್ರೀಪಲ್ಲವಿ ಮಹಿಳಾ ಪ್ರಧಾನ ಚಿತ್ರ ಮಾಡಲು ಹೊರಟಿದ್ದಾರೆ.
ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟ್ರಿ ಕಾನ್ಸೆಪ್ಟ್ ಇಟ್ಟುಕೊಂಡು “ಕ್ಯಾನ್ಬೆರಿ ಬೇಬೀಸ್” ಎಂಬ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. 5 ಜನ ಯುವತಿಯರ ಸುತ್ತ ನಡೆಯುವ ಕಥೆ ಹೊಂದಿದ ಕ್ಯಾನ್ಬೆರಿ ಬೇಬೀಸ್ ಚಿತ್ರದ ಮುಹೂರ್ತ ಸಮಾರಂಭ ಗುರುವಾರ ನಡೆಯಿತು.
ಸಿಲಿಕಾನ್ ಸಿಟಿಯ ಬಲಮುರಿ ಬಾಲಚಂದ್ರ ಮಹಾಗಣಪತಿ ದೇವಸ್ಥಾನದಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ನಿರ್ದೇಶಕಿ ಶ್ರೀಪಲ್ಲವಿ ಮಾತನಾಡಿ, ನಾನು ಚಿತ್ರರಂಗಕ್ಕೆ ಬಂದು ಎಂಟು ವರ್ಷವಾಯ್ತು. ಕೆಲ ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ ನಂತರ ಮಾಯಾಜಾಲ ಎಂಬ ಸಿನಿಮಾ ಡೈರೆಕ್ಟ್ ಮಾಡಿದ್ದೆ. ಇದು ಎರಡನೇ ಚಿತ್ರ. ದೊಡ್ಡ ಕನಸಿಟ್ಟುಕೊಂಡು ಬೆಂಗಳೂರಿಗೆ ಬರುವ ಐವರು ಯುವತಿಯರು ಇಲ್ಲಿ ಬಂದಮೇಲೆ ಏನೆಲ್ಲ ತೊಂದರೆ ರಿಸ್ಕ್ ಗಳನ್ನು ಎದುರಿಸಿದರು ಎಂಬುವುದನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ ಎಂದು ಹೇಳಿದ್ದಾರೆ.
ನಂದಿನಿಗೌಡ, ರಕ್ಷಾ, ಸುಶ್ಮಿತಾಗೌಡ, ಹಾಸ್ಯನಟ ವಿಜಯ್ ಚೆಂಡೂರ್, ಹಿರಿಯ ನಟ, ಸಂಕಲನಕಾರ ನಾಗೇಂದ್ರ ಅರಸ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಎಸ್.ನಾಗು ಸಂಗೀತವಿದ್ದು, ರಾಮ್ ನಾರಾಯಣ್ ಸಾಹಿತ್ಯ ರಚಿಸಿದ್ದಾರೆ. ಎಸ್.ಎಸ್.ಈಶ್ವರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಆರ್ಯನ್ ರೋಷನ್ ಕೊರಿಯೋಗ್ರಫಿ, ಧನುಷ್ ಅವರ ಸಂಕಲನ, ವೀರೇಶ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.