ಹೊಸಪೇಟೆ: ರಾಜ್ಯದಲ್ಲಿ ಕುರುಬರು ಸೇರಿದಂತೆ ಹಲವು ಪ್ರಬಲ ಸಮುದಾಯಗಳು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸಬೇಕೆಂದು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ, ಮೀಸಲಾತಿ ರಾಜಕಾರಣ ಹೊಸ ತಿರುವು ಪಡೆದಿದೆ. ಎಸ್‌ಟಿ ಸಮುದಾಯದ ಮೀಸಲಾತಿ ಪಾಲು ಪಡೆಯಲು ನಡೆಯುತ್ತಿರುವ ಪ್ರಯತ್ನಗಳ ವಿರುದ್ಧ ವಾಲ್ಮೀಕಿ ನಾಯಕ ಸಮಾಜದ ಸಭೆಯಲ್ಲಿ ತೀಕ್ಷ್ಣ ಎಚ್ಚರಿಕೆ ನೀಡಿರುವ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, “ಅನ್ನದ ಜೊತೆ ತಟ್ಟೆಯನ್ನೂ ತನ್ನಿ, ಖಾಲಿ ತಟ್ಟೆಯಲ್ಲಿ ಬಂದು ನಮ್ಮ ಪಾಲಿಗೆ ಕೈ ಹಾಕಬೇಡಿ” ಎಂದು ಗುಡುಗಿದ್ದಾರೆ.
ಹೊಸಪೇಟೆಯಲ್ಲಿ ವಾಲ್ಮೀಕಿ ನಾಯಕ ಸಮಾಜ ಆಯೋಜಿಸಿದ್ದ ಮೀಸಲಾತಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಮಾಡದೆ ಬೇರೆ ಸಮುದಾಯಗಳನ್ನು ಸೇರಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಉಗ್ರಪ್ಪ ಮುಂದಿಟ್ಟ ಷರತ್ತುಗಳೇನು?
ಸಭೆಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ ಉಗ್ರಪ್ಪ, “ಯಾವುದೇ ಸಮುದಾಯವನ್ನು ಎಸ್‌ಟಿಗೆ ಸೇರಿಸಲು ನಮ್ಮ ವಿರೋಧವಿಲ್ಲ. ಆದರೆ, ಅದಕ್ಕೆ ಮೊದಲು ವೈಜ್ಞಾನಿಕವಾಗಿ ಕುಲಶಾಸ್ತ್ರ ಅಧ್ಯಯನ ನಡೆಯಬೇಕು. ಆ ಸಮುದಾಯ ಅರ್ಹತೆ ಪಡೆದಿದ್ದರೆ, ಅದಕ್ಕೆ ತಕ್ಕಂತೆ ಹೆಚ್ಚುವರಿ ಮೀಸಲಾತಿಯನ್ನೂ ಸರ್ಕಾರ ಘೋಷಿಸಬೇಕು. ಈಗಿರುವ 7.5% ಮೀಸಲಾತಿಯಲ್ಲಿ ಹೊಸಬರಿಗೆ ಪಾಲು ನೀಡಲು ನಾವು ಸಿದ್ಧರಿಲ್ಲ. ‘ಅನ್ನದ ಜೊತೆಗೆ ತಟ್ಟೆಯನ್ನೂ ತರಬೇಕು’. ಈ ವಿಚಾರವನ್ನು ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವರಿಕೆ ಮಾಡಿದ್ದೇವೆ” ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಈ ಬೇಡಿಕೆ ಮತ್ತಷ್ಟು ರಾಜಕೀಯ ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ ಉಗ್ರಪ್ಪ ಅವರ ಹೇಳಿಕೆ, ಸ್ವತಃ ಕಾಂಗ್ರೆಸ್‌ನಲ್ಲೇ ಇರುವ ಒತ್ತಡ ಮತ್ತು ಆತಂಕಗಳನ್ನು ಬಿಂಬಿಸುತ್ತದೆ.
ಆದರೆ, ಉಗ್ರಪ್ಪ ಅವರ ಷರತ್ತುಬದ್ಧ ನಿಲುವಿಗೂ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ವಾಲ್ಮೀಕಿ ಸಮಾಜದ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ್ ಅವರು ಮಾತನಾಡಿ, “ಮೀಸಲಾತಿ ಹೆಚ್ಚಿಸಿದರೂ ಸಹ, ಬಹುಸಂಖ್ಯಾತರಾದ ಕುರುಬರು ಅಥವಾ ಇತರ ಸಮುದಾಯಗಳನ್ನು ಎಸ್‌ಟಿಗೆ ಸೇರಿಸುವುದು ಅಪಾಯಕಾರಿ. ಇದರಿಂದ ಮೂಲ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗಗಳಿಗೆ ಸಿಗಬೇಕಾದ ಸೌಲಭ್ಯಗಳು ಕೈತಪ್ಪಿ ಹೋಗುತ್ತವೆ. ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ಘೋರ ಅನ್ಯಾಯವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಬೇರೆ ಸಮುದಾಯಗಳ ಸೇರ್ಪಡೆಗೆ ನಮ್ಮ ಒಪ್ಪಿಗೆ ಇಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿದರು. ಇದು ವಾಲ್ಮೀಕಿ ಸಮುದಾಯದೊಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿತು.
ಮುಂದಿನ ಹೋರಾಟದ ಹಾದಿ
ಈ ಗೊಂದಲಗಳ ಹಿನ್ನೆಲೆಯಲ್ಲಿ, ವಾಲ್ಮೀಕಿ ನಾಯಕ ಸಮಾಜದ ನಿಲುವನ್ನು ಸ್ಪಷ್ಟಪಡಿಸಲು ಮತ್ತು ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಿನ ದಿನಗಳಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಕಮಲಾಪುರದಲ್ಲಿ ಎರಡು ಬೃಹತ್ ವಿಚಾರ ಸಂಕಿರಣಗಳನ್ನು ಆಯೋಜಿಸಲು ಸಭೆ ನಿರ್ಧರಿಸಿದೆ. ಈ ಮೂಲಕ ರಾಜ್ಯಕ್ಕೆ ತಮ್ಮ ಒಟ್ಟಾರೆ ಅಭಿಪ್ರಾಯವನ್ನು ತಲುಪಿಸಲು ತೀರ್ಮಾನಿಸಲಾಯಿತು.
ಎಸ್‌ಟಿ ಮೀಸಲಾತಿ ಸೇರ್ಪಡೆ ವಿಚಾರವು ವಾಲ್ಮೀಕಿ ಸಮುದಾಯದೊಳಗೆ ಮಾತ್ರವಲ್ಲದೆ, ರಾಜ್ಯ ರಾಜಕಾರಣದಲ್ಲೂ ದೊಡ್ಡ ಸಂಚಲನ ಮೂಡಿಸಿದೆ. ಒಂದು ಕಡೆ ಸೇರ್ಪಡೆಗೆ ಷರತ್ತು ವಿಧಿಸುವ ಕೂಗು, ಇನ್ನೊಂದು ಕಡೆ ಸೇರ್ಪಡೆಯೇ ಬೇಡ ಎನ್ನುವ ವಿರೋಧ ವ್ಯಕ್ತವಾಗಿದ್ದು, ಸರ್ಕಾರ ಈ ಸೂಕ್ಷ್ಮ ವಿಷಯವನ್ನು ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.








