ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವ ಬಹುಕಾಲದ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮದೇ ಸಮುದಾಯಕ್ಕೆ ನ್ಯಾಯ ಒದಗಿಸುವಲ್ಲಿ ಮುಖ್ಯಮಂತ್ರಿಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಅವರು ಕಿಡಿಕಾರಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂಬುದು ನಮ್ಮ ಹಕ್ಕು. ನಾವು ವಾಲ್ಮೀಕಿ ಸಮಾಜಕ್ಕೆ ನೀಡಿರುವ ಮೀಸಲಾತಿಯನ್ನು ಕಿತ್ತುಕೊಳ್ಳಲು ಕೇಳುತ್ತಿಲ್ಲ. ಅವರಿಗೆ ನೀಡಿದ ನಂತರ ಉಳಿಯುವ ಶೇಕಡ ಏಳರಷ್ಟು ಮೀಸಲಾತಿಯಲ್ಲಿ ನಮಗೂ ಅವಕಾಶ ನೀಡಿ ಎಂದು ಕೇಳುತ್ತಿದ್ದೇವೆ. ಆದರೆ, ಈ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಸಿದ್ದರಾಮಯ್ಯ ಅವರಿಗೆ ಮನಸ್ಸಿಲ್ಲ” ಎಂದು ಆರೋಪಿಸಿದರು.
ಉಗ್ರಪ್ಪ ಬೆದರಿಕೆಗೆ ಸಿಎಂ ಮಣಿದಿದ್ದಾರೆ
ಎಸ್‌ಟಿ ಸಮುದಾಯದ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಅವರಂತಹವರ ವಿರೋಧ ಹಾಗೂ ಬೆದರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣಿದಂತೆ ಕಾಣುತ್ತಿದೆ. ತಮ್ಮ ಸಮುದಾಯದ ಹಿತಾಸಕ್ತಿಗಿಂತಲೂ ರಾಜಕೀಯ ಒತ್ತಡಗಳಿಗೆ ಅವರು ಹೆಚ್ಚು ಮಣೆ ಹಾಕುತ್ತಿದ್ದಾರೆ. ಇದು ಕುರುಬ ಸಮಾಜಕ್ಕೆ ಮಾಡುತ್ತಿರುವ ದೊಡ್ಡ ಅನ್ಯಾಯ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕಣ್ಣು, ಕಿವಿ, ಮೂಗು ಇಲ್ಲದ ಸರ್ಕಾರ
ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆಯೂ ಟೀಕಿಸಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದೆಯೇ ಎಂಬ ಅನುಮಾನ ಕಾಡುತ್ತಿದೆ. ನವೆಂಬರ್, ಡಿಸೆಂಬರ್‌ನಲ್ಲಿ ಕ್ರಾಂತಿ ಮಾಡುವ ಮಾತು ಹಾಗಿರಲಿ, ಮೊದಲು ಬೆಂಗಳೂರು ಸೇರಿದಂತೆ ರಾಜ್ಯದ ರಸ್ತೆ ಗುಂಡಿಗಳನ್ನು ಮುಚ್ಚುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ಇದು ಕಣ್ಣು, ಕಿವಿ, ಮೂಗು ಇಲ್ಲದ ಜಡ ಸರ್ಕಾರ” ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನಲ್ಲಿ ಆಂತರಿಕ ಬೇಗುದಿ
ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದ ಬಗ್ಗೆ ಮಾತನಾಡಿದ ಈಶ್ವರಪ್ಪ, “ಹಿಂದೆ ಲಿಂಗಾಯತ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸಿ ವಿಫಲರಾಗಿದ್ದರು. ಈಗ ಮತ್ತೆ ಅದೇ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಸಚಿವರಾದ ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ಪರಮೇಶ್ವರ್ ಅವರು ನಿರಂತರವಾಗಿ ಸಭೆಗಳನ್ನು ನಡೆಸುತ್ತಿರುವುದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಸಾಕ್ಷಿ,” ಎಂದರು.
ಡಿಕೆಶಿ ಬಣ ಹೆದರಿಸಲು ಸಂಪುಟ ಪುನಾರಚನೆ ತಂತ್ರ
ಮುಖ್ಯಮಂತ್ರಿ ಸ್ಥಾನದ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ಉಲ್ಲೇಖಿಸಿದ ಅವರು, “ಒಂದು ಕಡೆ ಮುಖ್ಯಮಂತ್ರಿಗಳ ಪುತ್ರ, ತಾವೇ ಸಿಎಂ ಆಗಿ ಮುಂದುವರಿಯುವುದಾಗಿ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್‌ನ ಯಾವುದೇ ನಾಯಕ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇದರ ನಡುವೆ, ಸಂಪುಟ ಪುನಾರಚನೆಯ ಚರ್ಚೆಯನ್ನು ಹುಟ್ಟುಹಾಕಲಾಗಿದೆ. ಇದು ಕೇವಲ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ ಬೆಂಬಲಿಗರನ್ನು ಹೆದರಿಸುವ ತಂತ್ರ. ಅಧಿಕಾರ ಹಂಚಿಕೆಯ ಬಗ್ಗೆ ಯಾರೂ ಮಾತನಾಡಬಾರದು, ಪ್ರಶ್ನಿಸಬಾರದು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಈ ನಾಟಕವಾಡುತ್ತಿದ್ದಾರೆ” ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದರು.








