ಮೇ 4 ರಿಂದ ದೇಶದಲ್ಲಿ ಲಾಕ್ ಡೌನ್ 3.0 ಜಾರಿ ಇರಲಿದ್ದು, ಎರಡು ವಾರಗಳ ಕಾಲ ಲಾಕ್ ಡೌನ್ ಮುಂದುವರಿಯುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ನಿನ್ನೆ ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯನ್ನ ಆಧರಿಸಿ ಇಂದು ರಾಜ್ಯ ಸರ್ಕಾರವೂ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರ ಯಾವೆಲ್ಲಾ ನಿಬಂಧನೆಗಳನ್ನ ಹಾಕಿತ್ತೋ ಅದನ್ನ ಯಥಾವತ್ ರಾಜ್ಯದಲ್ಲೂ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯದ ಹೊಸ ಮಾರ್ಗಸೂಚಿ ಪ್ರಕಾರ, ಅಂತರ್ ರಾಜ್ಯ ಜಿಲ್ಲಾ ಪ್ರವಾಸಕ್ಕೆ ಪಾಸ್ ನೀಡಲು ಸರ್ಕಾರ ನಿರ್ಧರಿಸಿದೆ. ಲಾಕ್ ಡೌನ್ ವೇಳೆ ಊರಿನಲ್ಲಿ ಅಥವಾ ಬೆಂಗಳೂರಿನಲ್ಲಿ ಸಿಕ್ಕಿಬಿದ್ದವರಿಗೆ ಪಾಸ್ ನೀಡಲಾಗ್ತಿದೆ. ಒಂದು ದಿನಕ್ಕೆ ಒಂದು ಬಾರಿ ಪ್ರಯಾಣ ಬೆಳೆಸಲು ಮಾತ್ರ ಪಾಸ್ ನೀಡಲಾಗ್ತಿದೆ. ಲಾಕ್ ಡೌನ್ ವೇಳೆ ಸಿಲುಕಿದವರು ಪಾಸ್ ಪಡೆಯಬಹುದು, ಊರಿಗೆ ಅಥವಾ ಕೆಲಸದ ಸ್ಥಳಕ್ಕೆ ತೆರಳಲು ಪಾಸ್ ನೀಡಲಾಗುತ್ತದೆ.
ಇನ್ನು ಕೆಂಪು ವಲಯದಲ್ಲಿ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲ. ಶಾಲಾ-ಕಾಲೇಜು, ಜಿಮ್, ಮಾಲ್, ಸಿನಿಮಾ ಥಿಯೇಟರ್ ಸೇರಿದಂತೆ ಎಲ್ಲವೂ ಬಂದ್ ಇರಲಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ, ಕ್ಯಾಬ್, ಮೆಟ್ರೋ ಸೇವೆ ಕೂಡ ಬಂದ್ ಇರಲಿದೆ. ಆದ್ರೆ ಹಸಿರು ವಲಯದಲ್ಲಿ ಸಾಕಷ್ಟು ವಿನಾಯಿತಿ ನೀಡಲಾಗಿದೆ. ಇಲ್ಲಿ ಸಾರ್ವಜನಿಕ ಸಾರಿಗೆ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದ್ರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕೆಂಪು ವಲಯದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಖಾಸಗಿ ಕಂಪನಿಗಳಿಗೆ ಕೆಲಸ ಮಾಡಲು ಅವಕಾಶ ನೀಡಲಾಗ್ತಿದೆ. ಶೇಕಡಾ 33ರಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕೆಂದು ಷರತ್ತು ವಿಧಿಸಲಾಗಿದೆ. ಇಷ್ಟೇ ಅಲ್ಲ ಬೈಕ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದ್ರೆ ಬೈಕ್ ನಲ್ಲಿ ಒಬ್ಬರು ಮಾತ್ರ ಸಂಚರಿಸಬೇಕು. ಇನ್ನು ಕಾರಿನಲ್ಲಿ ಪ್ರಯಾಣ ಬೆಳೆಸಲು ಮೂವರಿಗೆ ಅವಕಾಶ ನೀಡಲಾಗಿದೆ. ಚಾಲಕ ಸೇರಿ ಮೂವರು ಮಾತ್ರ ಕಾರಿನಲ್ಲಿ ಪ್ರಯಾಣ ಬೆಳೆಸಬೇಕೆಂದು ಹೇಳಲಾಗಿದೆ.
ಖಾಸಗಿ ಆಸ್ಪತ್ರೆ ಒಪಿಡಿ ತೆರೆಯಲು ಅವಕಾಶ ನೀಡಲಾಗಿದೆ. ಅಗತ್ಯವಲ್ಲದ ಉದ್ದೇಶಕ್ಕೆ ವೃದ್ಧರು, ಮಕ್ಕಳು ಸೇರಿದಂತೆ ಗರ್ಭಿಣಿಯರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಸಂಜೆ 7ರಿಂದ ಬೆಳಿಗ್ಗೆ 7ರವರೆಗೆ ಓಡಾಟವನ್ನು ನಿಷೇಧಿಸಲಾಗಿದೆ.