ಬೆಂಗಳೂರು: ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ರಾಜ್ಯ ಸರ್ಕಾರ ಬರ ಪರಿಹಾರ (crop compensation) ಬಿಡುಗಡೆ ಮಾಡಿದೆ.
ಎಸ್ಡಿಆರ್ಎಫ್ ಪರಿಹಾರ ನಿಧಿ ಅಡಿಯಲ್ಲಿ ಸರ್ಕಾರದಿಂದ 105 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದ ಯಾವುದೇ ಪರಿಹಾರ ಬಾರದ ಹಿನ್ನೆಲೆ ರಾಜ್ಯ ಸರ್ಕಾರ ರೈತರಿಗೆ ಪ್ರಾಥಮಿಕ ಪರಿಹಾರ ನೀಡಿದೆ. ರೈತರಿಗೆ ಗರಿಷ್ಠ 2 ಸಾವಿರ ರೂ. ಪರಿಹಾರ ಹಣ ಬಿಡುಗಡೆಗೆ ಸರ್ಕಾರ ಅನುಮೋದಿಸಿದೆ.
ಮಳೆಯಾಶ್ರಿತ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ಗೆ 8500 ರೂ., ನೀರಾವರಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ಗೆ 17,500 ರೂ., ಬಹುವಾರ್ಷಿಕ ಬೆಳೆ ಹಾನಿಗೆ ಹೆಕ್ಟೇರ್ಗೆ 22,500 ರೂ. ಅನುದಾನ ಬಿಡುಗಡೆ ಮಾಡಿದೆ. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಮೂರು ಹಂತದಲ್ಲಿ ಘೋಷಿಸಲಾಗಿದೆ. 18171.44 ಕೋಟಿ ರೂ. ಪರಿಹಾರದ ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಕೇಂದ್ರ ನಮ್ಮ ತೆರಿಗೆ ಹಣದ ಪಾಲನ್ನು ನಮಗೆ ಮರಳಿ ಕೊಟ್ಟರೂ ಸಾಕು ಎಂದು ಮನವಿ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಮಾತ್ರ ಯಾವುದೇ ಪರಿಹಾರ ನೀಡಿಲ್ಲ.








