ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ವಾಪಸ್ ಪಡೆಯಬೇಕು : ಸಿದ್ದರಾಮಯ್ಯ

1 min read
Modi's saaksha tv

ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ವಾಪಸ್ ಪಡೆಯಬೇಕು : ಸಿದ್ದರಾಮಯ್ಯ

ಕರಾಳ ಕೃಷಿ ಕಾಯ್ದೆಗಳನ್ನು ನರೇಂದ್ರ ಮೋದಿ ಸರ್ಕಾರ ವಾಪಸು ಪಡೆದಂತೆ ರಾಜ್ಯ ಬಿಜೆಪಿ ಸರ್ಕಾರ ಕೂಡಾ ರೈತ ವಿರೋಧಿಯಾಗಿರುವ ಎಪಿಎಂಸಿ(ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆಯನ್ನು ತಕ್ಷಣ ವಾಪಸು ಪಡೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕರಾಳ ಕೃಷಿ ಕಾಯ್ದೆಗಳನ್ನು ರೈತರ ಮೇಲೆ ಹೇರಿದ ನರೇಂದ್ರ ಮೋದಿ ಸರ್ಕಾರದ ಅಪರಾಧದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಸಮಾನ ಪಾಲಿದೆ. ಮೋದಿ ಅವರು ಕೊಂದ ಪಾಪವನ್ನು ತಿಂದು ಪರಿಹರಿಸಿಕೊಂಡರು,ಈಗ ರಾಜ್ಯ ಬಿಜೆಪಿ ಸರ್ಕಾರದ ಸರದಿ.

ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪೆನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆಯ ದುರುದ್ದೇಶವಾಗಿದೆ.

ಎಪಿಎಂಸಿಯ ಹೊಸ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಎಂಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ.ಅವರ ವ್ಯವಹಾರದ ಮೇಲೆ ನಿಗಾ ಇಡುವಂತಿಲ್ಲ,ಶುಲ್ಕ,ಸೆಸ್,ಲೆವಿ ಸಂಗ್ರಹಿಸುವಂತಿಲ್ಲ.ಇದು ಸರ್ಕಾರದ ಸಂಪೂರ್ಣ ಶರಣಾಗತಿ.

ಪ್ರಸ್ತುತ 6% ರೈತರು ಎಪಿಎಂಸಿಗಳಲ್ಲಿ ಬೆಳೆ ಮಾರಾಟ ಮಾಡುತ್ತಿದ್ದು 94% ರೈತರಿಗೆ ಮಾರುಕಟ್ಟೆ ಸೌಲಭ್ಯಗಳಿಲ್ಲ. ರೈತರಿಗೆ ನೆರವಾಗುವ ಉದ್ದೇಶ ಸರ್ಕಾರಕ್ಕಿದ್ದರೆ ಮಾರುಕಟ್ಟೆಗಳಿಲ್ಲದ ಕಡೆಗಳಲ್ಲಿ ಎಪಿಎಂಸಿಯಿಂದ ಪರವಾನಿಗೆ ಪಡೆದು ಮಾರುಕಟ್ಟೆಗಳನ್ನು ಸ್ಥಾಪಿಸಲು ಸರ್ಕಾರ ಉತ್ತೇಜನ ನೀಡಬಹುದಾಗಿದೆ.

ರೈತರ ಭೂಮಿಗಿದ್ದ ರಕ್ಷಣೆಯನ್ನು ಕಿತ್ತು ಹಾಕಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಭೂಗಳ್ಳರಿಗೆ ನೆರವಾಗುವ ದುರುದ್ದೇಶದ್ದು.ನಮ್ಮ ವಿರೋಧವನ್ನು ಧಿಕ್ಕರಿಸಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಹೊರಟಿದೆ. ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರ ಕೂಡಾ ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು.

Siddaramaiah saaksha tv

ಕೃಷಿ ಭೂಮಿ ಖರೀದಿಗೆ ಇದ್ದ ರೂ.25 ಲಕ್ಷ ಆದಾಯದ ಮಿತಿಯನ್ನು ರದ್ದುಗೊಳಿಸಿ,ಕೃಷಿಕರಲ್ಲದವರು ಕೂಡಾ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲು,ಭೂ ಸುಧಾರಣಾ ಕಾಯ್ದೆ 1961ರ ಸೆಕ್ಟನ್ 80 ಮತ್ತು 79 ಎ ಬಿ ಸಿ ಗಳನ್ನು ರದ್ದು ಮಾಡಿರುವ ಬಿಜೆಪಿ ಸರ್ಕಾರ,ರೈತರನ್ನು ಬೀದಿಪಾಲು ಮಾಡಲು ಹೊರಟಿದೆ

ಭೂ ಸುಧಾರಣಾ ಕಾಯ್ದೆ 1961ರ ಸೆಕ್ಷನ್ ಎ,ಬಿ,ಸಿ ಯಡಿಯಲ್ಲಿ ಸುಮಾರು 1.7 ಲಕ್ಷ ಎಕರೆ ಜಮೀನಿಗೆ ಸಂಬಂಧಿಸಿದ 13,814 ಪ್ರಕರಣಗಳು ದಾಖಲಾಗಿತ್ತು.ಭೂ ಸುಧಾರಣೆ ತಿದ್ದುಪಡಿ ಮಸೂದೆಯಿಂದ ಈ ಪ್ರಕರಣಗಳು ರದ್ದಾಗಿ ಸರ್ಕಾರದ ಖಜಾನೆಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದೆ

ಸದನದ ಒಳಗೆ ಮತ್ತು ಹೊರಗೆ ಈ ಎರಡು ಕರಾಳ ಕಾಯ್ದೆಗಳನ್ನು ಕಾಂಗ್ರೆಸ್ ವಿರೋಧಿಸಿದೆ.
ಇಂತಹ ಕಾಯ್ದೆಗಳನ್ನು ರೂಪಿಸುವ ಹಂತದಲ್ಲಿ ರೈತ ನಾಯಕರು ಮತ್ತು ವಿರೋಧಪಕ್ಷಗಳ ಜೊತೆ ಚರ್ಚೆ ನಡೆಸುವುದು ಪ್ರಜಾಪ್ರಭುತ್ವದ ನಡವಳಿಕೆ. ಬಿಜೆಪಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ.

ಎಪಿಎಂಸಿ(ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳನ್ನು ವಾಪಸು ಪಡೆಯಲು ಕಾಂಗ್ರೆಸ್ ಹೋರಾಟ ನಡೆಸುವುದರ ಜೊತೆಗೆ ರಾಜ್ಯದ ರೈತ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಹೋರಾಟಕ್ಕೂ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd