ಪರೀಕ್ಷೆಗೆ ಹೋಗಲು ಬಸ್ ಸೌಕರ್ಯವಿಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು
ಯಾದಗಿರಿ: ಶಾಲಾ-ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಬಸ್ ಇಲ್ಲದೆ 4-5 ಕಿ.ಮಿ ನಡೆದುಕೊಂಡು ಹೋಗುತ್ತಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಸಧ್ಯ ಶಾಲಾ-ಕಾಲೇಜುಗಳಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಗಳು, ವಾರ್ಷಿಕ ಪರೀಕ್ಷಗಳು ಪ್ರಾರಂಭವಾಗಿವೆ. ಆದರೆ ಪರೀಕ್ಷೆಗೆ ಹೋಗಲು ಶೆಟ್ಟಿಗೇರಾ, ಕೋಳೂರು, ಮುಷ್ಟೂರು, ನಾಗರಬಂಡೆ, ಮಾಲಾರ ತಾಂಡಾ, ಜಿಂಕೇರಾ, ಎಂ. ಹೊಸಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಸುಡುವ ರಣ ಬಿಸಿಲಿನಲ್ಲ ಹೊಲ, ಗದ್ದಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ.
ಇವರಿಗೆ ದಿನ ನಿತ್ಯ ಶಾಲಾ-ಕಾಲೇಜುಗಳಿಗೆ ಹೋಗಲು ಬಸ್ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ. ಈ ಕುರಿತು ಸಾರಿಗೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಈ ಊರುಗಳಿಗೆ ಸರಕಾರಿ ಬಸ್ ಬರೋದು ಕಡಿಮೆ, ಯಾವಗಲಾದರೂ ಒಂದು ಸಲ ಬರುತ್ತೆ, ಬಂದರು ಕೂಡಾ ಸರಿಯಾದ ಸಮಯಕ್ಕೆ ಬರುವುದಿಲ್ಲ. ಇದರಿಂದ ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯದಲ್ಲಿ ತಲುಪಲು ಆಗುವುದಿಲ್ಲ, ಹೀಗಾಗಿ ಸಂಚಾರಕ್ಕಾಗಿ ಅಟೋಗಳನ್ನೇ ಅವಲಂಬಿಸಿದ್ದೇವೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.