ಲಕ್ನೋ: ನಿದ್ದೆ ತಡೆಯುವುದಕ್ಕಾಗಿ ಉಗ್ರರು ಸೇವಿಸುವ ಮಾತ್ರೆಯನ್ನು ವಿದ್ಯಾರ್ಥಿಗಳು ಸೇವಿಸುತ್ತಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಸದ್ಯ ದೇಶದಲ್ಲಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯ ತಯಾರಿಯಲ್ಲಿದ್ದು, ವಿದ್ಯಾರ್ಥಿಯೊಬ್ಬಳು ನಿದ್ದೆ ತಡೆಯುವುದಕ್ಕಾಗಿ ಈ ಮಾತ್ರೆ ಸೇವಿಸಿದ್ದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಪರೀಕ್ಷಾ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಕುಸಿದುಬಿದ್ದಿದ್ದಾಳೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ನರಗಳು ಊದಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಸದ್ಯ ವಿದ್ಯಾರ್ಥಿನಿ ಆರೋಗ್ಯ ಚೇತರಿಸಿಕೊಳ್ಳುತ್ತಿದೆ. ಆಗ ಪಾಲಕರು ಓದುತ್ತಿದ್ದ ರೂಮ್ ಪರಿಶೀಲಿಸಿದಾಗ ಮಾತ್ರೆಗಳು ತುಂಬಿದ ಬಾಟ್ಲಿಯೊಂದು ಪತ್ತೆಯಾಗಿದೆ. ಇದರಿಂದ ಆತಂಕಗೊಂಡ ಪೋಷಕರು ಮಾತ್ರೆಗಳನ್ನು ವೈದ್ಯರ ಬಳಿ ತೋರಿಸಿದ್ದಾರೆ. ಇದು ನಿದ್ದೆಯಿಂದ ತಪ್ಪಿಸಿಕೊಳ್ಳಲು ಬಳಸುವ ಮಾತ್ರೆ ಎಂದು ವೈದ್ಯರು ಹೇಳಿದ್ದಾರೆ.
ಈ ಒಂದು ಮಾತ್ರೆ ಸೇವಿಸಿದರೆ ಸುಮಾರು 40 ಗಂಟೆಗಳ ಕಾಲ ಎಚ್ಚರದಿಂದ ಇರುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಮಾತ್ರೆಗಳನ್ನು ಉಗ್ರರು ತೆಗೆದುಕೊಳ್ಳುತ್ತಾರೆ. ಭಯೋತ್ಪಾದಕ ದಾಳಿ ವೇಳೆ ನಿದ್ರೆ ತಪ್ಪಿಸಲು ಉಗ್ರರು ಇಂತಹ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ, ಇವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಿಲ್ಲ. ಕಳ್ಳ ಮಾರ್ಗದಲ್ಲಿ ದೇಶಕ್ಕೆ ಸಾಗಿಸಲಾಗುತ್ತಿದೆ. ಆದರೆ, ಈ ಮಾತ್ರ ವಿದ್ಯಾರ್ಥಿನಿಯ ಕೈಗೆ ಹೇಗೆ ಸಿಕ್ಕಿತು ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ಸದ್ಯ ಈ ಕುರಿತು ಕ್ರಮ ಕೈಗೊಳ್ಳುವಂತೆ ಪಾಲಕರು ಆಗ್ರಹಿಸಿದ್ದಾರೆ.