ಕೊಚ್ಚಿ : ಪ್ರಧಾನಿ ನರೇಂದ್ರ ಮೋದಿ (Narendra Modi) ಕೇರಳ ಭೇಟಿಗೂ ಮುನ್ನ ಬೆದರಿಕೆ ಪತ್ರ ಬಂದಿದೆ. ಹೀಗಾಗಿ ಇಡೀ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಕೇರಳ (Kerala) ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ (K Surendran) ಅವರಿಗೆ ಬರೆಯಲಾದ ಪತ್ರದಲ್ಲಿ ಏಪ್ರಿಲ್ 24 ರಂದು ಕೊಚ್ಚಿಯಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ (Suicide Bomb Attck)ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಅವರು ಈ ಬೆದರಿಕೆ ಪತ್ರವನ್ನು ಪೊಲೀಸರಿಗೆ ನೀಡಿದ್ದು, ಅದರಲ್ಲಿ ಹೆಸರು ಮತ್ತು ವಿಳಾಸವನ್ನು ಸಹ ಬರೆಯಲಾಗಿದೆ. ಕೂಡಲೇ ಪೊಲೀಸರು ಪತ್ರದಲ್ಲಿ ನಮೂದಿಸಿರುವ ವಿಳಾಸಕ್ಕೆ ತಲುಪಿದ್ದಾರೆ.
ಈ ವಿಳಾಸದಲ್ಲಿ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದಾರೆ, ಅವರು ಬೆದರಿಕೆ ಪತ್ರದ ವಿಚಾರವನ್ನು ಕೇಳಿ ತುಂಬಾ ಭಯಗೊಂಡಿದ್ದಾರೆ. ಅಂತಹ ಯಾವುದೇ ಬೆದರಿಕೆ ಪತ್ರ ಬರೆದಿಲ್ಲ ಎಂದು ಅವರು ಹೇಳಿದ್ದಾರೆ. ಯಾರೋ ತನ್ನ ಹೆಸರಿನಲ್ಲಿ ಈ ಸುಳ್ಳು ಬೆದರಿಕೆ ಪತ್ರವನ್ನು ಬರೆದಿದ್ದಾರೆ ಎಂದು ಹೇಳಿದ್ದಾರೆ. ಈ ಘಟನೆ ಏನೆಂದು ನನಗೆ ತಿಳಿದಿಲ್ಲ ಎಂದು ವ್ಯಕ್ತಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ, ಕೇರಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಘೋಷಿಸಲಾಗಿದೆ. ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿಯೂ ಬಂದೋಬಸ್ತ್ ಹೆಚ್ಚಿಸಲಾಗಿದೆ.
‘ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಭವಿಷ್ಯವನ್ನು ಪ್ರಧಾನಿ ಮೋದಿ ಎದುರಿಸಬೇಕಾಗುತ್ತದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಕೊಚ್ಚಿ ಮೂಲದ ಜಾನಿ ಅವರು ಪತ್ರ ಬರೆಯುವುದನ್ನು ನಿರಾಕರಿಸಿದ್ದಾರೆ. ಅಲ್ಲದೇ ಅದರ ಹಿಂದೆ ತನ್ನ ಶತ್ರುಗಳು ಇರಬಹುದೆಂದು ಆರೋಪಿಸಿದ್ದಾರೆ.