ತಮಿಳುನಾಡು ಸರ್ಕಾರದ ಮುಜರಾಯಿ (ಧಾರ್ಮಿಕ ಮತ್ತು ದಾನ ಧರ್ಮ) ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ 21 ಪ್ರಮುಖ ಹಿಂದೂ ದೇವಾಲಯಗಳಲ್ಲಿ ಭಕ್ತರು ನಿಷ್ಠೆಯಿಂದ ನೀಡಿದ್ದ ಆದರೆ ಬಳಸಲಾಗದ, ಬೇರೆ ಅಲಂಕಾರಕ್ಕೆ ಅಥವಾ ಸೇವೆಗಾಗಿ ಉಪಯೋಗಿಸಲಾಗದ ಚಿನ್ನವನ್ನು ಸಂಗ್ರಹಿಸಿ, ಸುಮಾರು 1 ಟನ್ ಅಥವಾ 1,074.123 ಕಿಲೋಗ್ರಾಂ ಚಿನ್ನವನ್ನು ಕರಗಿಸಿ 24 ಕ್ಯಾರೆಟ್ ಬಿಸ್ಕತ್ತುಗಳ ರೂಪಕ್ಕೆ ಪರಿವರ್ತಿಸಲಾಗಿದೆ.
ಈ ಚಿನ್ನದ ಬಿಸ್ಕತ್ತುಗಳನ್ನು ಮೌಲ್ಯವನ್ನು “ಗೋಲ್ಡ್ ಡಿಪಾಜಿಟ್ ಸ್ಕೀಮ್” ಅಡಿಯಲ್ಲಿ ಬ್ಯಾಂಕುಗಳಲ್ಲಿ ಠೇವಣಿಯಾಗಿ ಇಡಲಾಗಿದೆ. ಈ ಚಿನ್ನದ ಠೇವಣಿಯಿಂದ ತಮಿಳುನಾಡು ಸರ್ಕಾರಕ್ಕೆ ವರ್ಷಕ್ಕೆ ಸುಮಾರು ₹17.82 ಕೋಟಿ ಬಡ್ಡಿ ಹಣ ಲಭಿಸುತ್ತಿದೆ. ಈ ಬಡ್ಡಿ ಹಣವನ್ನು ದೇವಾಲಯಗಳ ಸುಧಾರಣೆ, ಸೌಕರ್ಯ ಅಭಿವೃದ್ಧಿ, ಮತ್ತು ಭಕ್ತರಿಗೆ ಉತ್ತಮ ಸೇವೆ ನೀಡಲು ಉಪಯೋಗಿಸಲಾಗುತ್ತದೆ.
ಈ ಎಲ್ಲಾ ಚಿನ್ನವನ್ನು ಭಕ್ತರು ಕಾಲಾಂತರದಲ್ಲಿ ದೇವಾಲಯಗಳಿಗೆ ನೀಡಿದ್ದರು – ಆಭರಣ, ಹಾರ, ಉಂಗುರ ಇತ್ಯಾದಿ ರೂಪದಲ್ಲಿ. ಆದರೆ ಅವು ದೇವತಾಪೂಜೆಯಲ್ಲಿ ನೇರವಾಗಿ ಬಳಸಲಾಗದೆ ಸಾಗಣಿ ರೂಪದಲ್ಲಿ ಇದ್ದವು. ಅವೆಲ್ಲವನ್ನೂ ಆಯ್ಕೆ ಮಾಡಿ ಈ ಯೋಜನೆಗೆ ಬಳಸಲಾಗಿದೆ ಎಂದು ಮುಜರಾಯಿ ಸಚಿವ ಪಿ.ಕೆ. ಶೇಖರ್ ಬಾಬು ತಿಳಿಸಿದ್ದಾರೆ.
ಈ ಚಿನ್ನವನ್ನು ಮುಂಬೈನ ಸರ್ಕಾರಿ ಟಂಕಸಾಲೆಯಲ್ಲಿ ಶುದ್ಧೀಕರಿಸಿ ಬಿಸ್ಕತ್ತುಗಳಾಗಿ ಪರಿವರ್ತಿಸಲಾಗಿದೆ. ಚಿನ್ನವನ್ನು ಧಾರ್ಮಿಕ ಪ್ರಾಮಾಣಿಕತೆ ಹಾಗೂ ನಿರ್ವಹಣೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾಗಿ ಹಾಗೂ ಪಾರದರ್ಶಕ ರೀತಿಯಲ್ಲಿ ನಿರ್ವಹಿಸಲು ಮೂರು ಸಮಿತಿಗಳನ್ನು ರಚಿಸಲಾಗಿದೆ. ಪ್ರತಿಯೊಂದು ಸಮಿತಿಗೂ ನಿವೃತ್ತ ನ್ಯಾಯಮೂರ್ತಿಗಳು ಮುಖ್ಯಸ್ಥರಾಗಿದ್ದಾರೆ.
ಈ 21 ದೇವಾಲಯಗಳಲ್ಲಿ ತಿರುಚಿರಾಪಳ್ಳಿ ಜಿಲ್ಲೆಯ ಸಮಯಾಪುರಂ ‘ಅರಳ್ಮಿಗು ಮಾರಿಯಮ್ಮನ್’ ದೇವಾಲಯವೇ ಹೆಚ್ಚಿನ ಚಿನ್ನ ನೀಡಿದೆ – ಸುಮಾರು 426.26 ಕೆ.ಜಿ ಚಿನ್ನವನ್ನು ನೀಡಿದೆ.
ಈ ಯೋಜನೆಯಿಂದಾಗಿ ದೇವಾಲಯಗಳ ಆರ್ಥಿಕ ಸಂಪತ್ತನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡು, ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸುವ ಸಾಧ್ಯತೆ ಹೆಚ್ಚಾಗಿದೆ. ಇದು ಇತರ ರಾಜ್ಯಗಳಿಗೆ ಕೂಡ ಮಾದರಿಯಾದ ನಿಟ್ಟಿನಲ್ಲಿ ಸಾಕಷ್ಟು ಪ್ರಶಂಸನೀಯ ಹೆಜ್ಜೆ ಎಂದು ಹೇಳಬಹುದು.
ಹೀಗೆ ಭಕ್ತರ ಭಕ್ತಿಯನ್ನು ಗೌರವದಿಂದ ಉಪಯೋಗಿಸಿ ದೇವಾಲಯ ಅಭಿವೃದ್ಧಿಗೆ ಬಳಸಿದ ಈ ಕ್ರಮವು ಪಾರದರ್ಶಕತೆ ಮತ್ತು ಜವಾಬ್ದಾರಿತನದ ಉತ್ತಮ ಉದಾಹರಣೆಯಾಗಿದೆ.
ಇನ್ನು ಈಗ ಬಗ್ಗೆ ನಿಮ್ಮ ಅಭಿಪ್ರಾಯವೇನು..?








