Team India won-ಬಾಂಗ್ಲಾದೇಶದಲ್ಲಿ ನಡೆದಿರುವ ವನಿತೆಯರ ಟಿ ೨೦ ಏಷ್ಯಾಕಪ್ ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಏಳನೇ ಬಾರಿಗೆ ಮಹಿಳಾ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಶ್ರೀಲಂಕಾವನ್ನು 8 ವಿಕೆಟ್‌ಗಳಿಂದ ಸೋಲಿಸಿತು.
ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತದ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ಮುಂದೆ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಲಷ್ಟೇ ಶಕ್ತವಾಯಿತು. ಇನೋಕಾ ರನ್ವೆರಾ ಗರಿಷ್ಠ 18 ರನ್ ಗಳಿಸಿದರು. ಭಾರತದ ಪರ ರೇಣುಕಾ ಸಿಂಗ್ ಠಾಕೂರ್ ಮೂರು ವಿಕೆಟ್ ಪಡೆದು ಮಿಂಚಿದರು . ರಾಜೇಶ್ವರಿ ಗೇವಾಡ್ ಮತ್ತು ಸ್ನೇಹ್ ರಾಣಾ ತಲಾ ಎರಡು ವಿಕೆಟ್ ಕಬಳಿಸಿದರು.
ಇದಕ್ಕೆ ಉತ್ತರವಾಗಿ ಭಾರತ 8.3 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿ ಗುರಿ ತಲುಪಿತು. ಸ್ಮೃತಿ ಮಂಧಾನ ಸಿಕ್ಸರ್ ಬಾರಿಸಿ ಟೀಂ ಇಂಡಿಯಾಗೆ ಪ್ರಶಸ್ತಿ ತಂದುಕೊಟ್ಟರು. ಮಂಧಾನ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 25 ಎಸೆತಗಳಲ್ಲಿ 51 ರನ್ ಗಳಿಸಿ ಅಜೇಯರಾಗಿ ಉಳಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 11 ರನ್ ಗಳಿಸಿ ಅಜೇಯರಾಗಿ ಉಳಿದರು.
ಏಷ್ಯಾಕಪ್ ಇತಿಹಾಸದಲ್ಲಿ ಶ್ರೀಲಂಕಾ ವಿರುದ್ಧದ 5ನೇ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಉಭಯ ತಂಡಗಳ ನಡುವೆ ಇದುವರೆಗೆ 5 ಫೈನಲ್ ಪಂದ್ಯಗಳು ನಡೆದಿವೆ. ಇವೆಲ್ಲವನ್ನೂ ಟೀಂ ಇಂಡಿಯಾ ಗೆದ್ದಿದೆ. ಭಾರತ ತಂಡ ಸತತ ಎಂಟನೇ ಬಾರಿ ಫೈನಲ್ ತಲುಪಿದೆ.
ಭಾರತ 14 ವರ್ಷಗಳ ಬಳಿಕ ಏಷ್ಯಾಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿತು. ಇದಕ್ಕೂ ಮೊದಲು 2008ರಲ್ಲಿ ಇಬ್ಬರ ನಡುವೆ ಮುಖಾಮುಖಿಯಾಗಿತ್ತು