Kidney Stone – ರೋಗಿಯ ಕಿಡ್ನಿಯಿಂದ 206 ಕಲ್ಲು ಹೊರತೆಗೆದ ವೈದ್ಯರು….
ಹೈದ್ರಾಬಾದ್ ನ ಅವೇರ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ರೋಗಿಯೊಬ್ಬರ ಮೂತ್ರಪಿಂಡದಲ್ಲಿ ರೂಪುಗೊಂಡ 206 ಕಲ್ಲುಗಳನ್ನು ಹೊರತೆಗೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಆಸ್ಪತ್ರೆಯ ವೈದ್ಯರು ಗುರುವಾರ ವಿವರ ಬಹಿರಂಗಪಡಿಸಿದ್ದಾರೆ.
ನಲ್ಲಗೊಂಡನ ವೀರಮಲ್ಲ ರಾಮಲಕ್ಷ್ಮಯ್ಯ (56) ಎಂಬುವವರು ಆರು ತಿಂಗಳಿನಿಂದ ನೋವಿನಿಂದ ಬಳಲುತ್ತಿದ್ದಾರೆ. ಕಳೆದ ತಿಂಗಳು ಅವರನ್ನು ಎಲ್ಬಿನಗರದ ಅವೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಿರಿಯ ಮೂತ್ರಶಾಸ್ತ್ರ ವೈದ್ಯಾಧಿಕಾರಿ ಪುಲಾ ಸುರೇಶ್ಕುಮಾರ್ ನೇತೃತ್ವದಲ್ಲಿ ರಾಮಲಕ್ಷ್ಮಯ್ಯ ಅವರನ್ನು ಕೂಲಂಕಷ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಡಭಾಗದ ಮೂತ್ರಪಿಂಡದಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ.

ವೈದ್ಯರು ಕೀಹೋಲ್ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ ಒಂದು ಗಂಟೆಯೊಳಗೆ 206 ಕಿಡ್ನಿ ಕಲ್ಲುಗಳನ್ನು ಹೊರತೆಗೆದಿದ್ದಾರೆ. ಎರಡು ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿದ್ದ ರಾಮಲಕ್ಷ್ಮಯ್ಯ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದು, ಅತಿಯಾದ ಬಿಸಿಲಿನಿಂದ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಮತ್ತು ರಸಯುಕ್ತ ಆಹಾರ ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಶೇಕಡಾವಾರು ನೀರಿನ ಪ್ರಮಾಣ ಕಡಿಮೆಯಾದರೆ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ.








