ಮೂರು ಟ್ರಕ್ ಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ವ್ಯಾಪಕ ಬೆಂಕಿ ಹೊತ್ತಿಕೊಂಡು ಐವರು ವ್ಯಕ್ತಿಗಳು ಹಾಗೂ 12 ಪ್ರಾಣಿಗಳು ಸಜೀವ ದಹನವಾಗಿರುವ ಘಟನೆ ಜೈಪುರ-ಅಜ್ಮೇರ್ ರಸ್ತೆಯಲ್ಲಿ ನಡೆದಿದೆ.
ರಸ್ತೆಯಲ್ಲಿ ನಿಂತಿದ್ದ ಎರಡು ಟ್ರಕ್ ಗಳಿಗೆ ಇನ್ನೊಂದು ಟ್ರಕ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಮೂರೂ ವಾಹನಗಳು ಸುಟ್ಟು ಕರಕಲಾಗಿವೆ. ಬೆಂಕಿಯಲ್ಲಿ ಸಿಲುಕಿ ಐವರು ದಹನಗೊಂಡಿದದ್ರೆ, 12 ಪ್ರಾಣಿಗಳು ಸುಟ್ಟು ಕರಕಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಜೈಪುರದ ದುಡು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಟ್ರಕ್ ನ ಚಾಲಕ ಸೇರಿದಂತೆ ಐವರು ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ. ಹರಿಯಾಣದ ಪವನ್ (28), ಸಂಜು (18), ಧರಮ್‌ವೀರ್ (34) ಹಾಗೂ ಬಿಹಾರದ ಛಾಪ್ರಾ ಮೂಲದ ಜಾನ್ ವಿಜಯ್ (35) ಮತ್ತು ಬಿಜ್ಲಿ (26) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಟ್ರಕ್ ಗಳು ರಸ್ತೆ ಬದಿಯಲ್ಲಿ ನಿಂತ ಸಂದರ್ಭದಲ್ಲಿ ಹರಿಯಾಣದಿಂದ ಪುಣೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಇನ್ನೊಂದು ಟ್ರಕ್ ಡಿಕ್ಕಿ ಹೊಡೆದಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಒಂದು ಟ್ರಕ್ ನಲ್ಲಿ ನೂಲಿನ ಬಂಡಲ್ ಗಳಿದ್ದರೆ, ಇನ್ನೊಂದು ಟ್ರಕ್ ನಲ್ಲಿ ಪ್ಲಾಸ್ಟಿಕ್ ಚೀಲಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.








