ರಾಮನಗರ: ಬಿಜೆಪಿ-ಜೆಡಿಎಸ್ (BJP- JDS) ಅಶ್ವಮೇಧ ಆರಂಭಿಸಿದ್ದು, ಪ್ರತಿಯೊಂದು ಅನ್ಯಾಯಕ್ಕೂ ಲೆಕ್ಕಾ ಚುಕ್ತಾ ಮಾಡ್ತೇವಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿ (Ramnagar) ಮೈಸೂರು ಚಲೋ (Mysuru Chalo) ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿ.ವೈ. ವಿಜಯೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಯಾಗ ಆರಂಭವಾಗಿದ್ದು, ನಿಮ್ಮನ್ನು ಮುಗಿಸುವ ಕಾಲ ಹತ್ತಿರ ಬಂದಿದೆ. ಈ ಸರ್ಕಾರ ಯಡಿಯೂರಪ್ಪ ಅವರ ವಿಷಯದಲ್ಲಿ ಅಮಾನುಷವಾಗಿ ವರ್ಸಿಸಿದೆ. ಅವರ ಮನಸ್ಸಿಗೆ ನೋವು ನೀಡಿದೆ. ಕಾಂಗ್ರೆಸ್ ನ ಪಾಪಾದ ಕೊಡ ತುಂಬಿ, ಕೊನೆಯ ಕಾಲ ಬಂದಿದೆ. ಅದೆಲ್ಲವನ್ನೂ ಚುಕ್ತಾ ಮಾಡ್ತೇವಿ ಎಂದು ಹೇಳಿದ್ದಾರೆ.
ಬಿಜೆಪಿ-ಜೆಡಿಎಸ್ ಶವಯಾತ್ರೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಕಲಬುರ್ಗಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಶವಯಾತ್ರೆ ಮಾಡಿಸಿದ್ದಾರೆ. ಬಲಿ ತೆಗೆದುಕೊಂಡು ಆ ಕುಟುಂಬವನ್ನು ಬೀದಿಪಾಲು ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದಾರೆ.
ನಾಡಿನ ಬಡ ಜನತೆ ಬೆವರು ಸುರಿಸಿ, ತೆರಿಗೆ ರೂಪದಲ್ಲಿ ಕಟ್ಟಿದ ಹಣ ಲೂಟಿ ಆಗುತ್ತಿದೆ. ಪರಿಶಿಷ್ಟರ ಹಣ ಲೂಟಿ ಮಾಡಿರುವ ಈ ಸರ್ಕಾರ ಇರಬೇಕೋ, ಬೇಡವೋ ಎನ್ನುವ ಕಾರ್ಯಕ್ರಮ ಇದು. ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು, ಲೂಟಿ ಮಾಡುತ್ತಿದ್ದಾರೆ. ನನ್ನ ಬಗ್ಗೆ, ವಿಜಯೇಂದ್ರ ಬಗ್ಗೆ ಸಿಡಿ ಶಿವು ಅವರು ಅತ್ಯಂತ ಲಘುವಾಗಿ ಮಾತಾಡಿದ್ದಾರೆ. ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಮಾತನಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.