ಕರ್ನಾಟಕ ನಿರ್ಮಾಪಕರ ರಕ್ತ ಗೋವಾದಲ್ಲಿ ಹರಿದಿರುವ ಘಟನೆ ನಡೆದಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಕಾರ್ಯಕಾರಣಿ ಸಭೆ ನಡೆಸಲು ಸದಸ್ಯರು ಗೋವಾಕ್ಕೆ ತೆರಳಿದ್ದರು. ಆದರೆ, ರಾತ್ರಿ ವೇಳೆ ಕುಡಿದು ಕುಪ್ಪಳಿಸುತ್ತಿದ್ದಾಗ ನಿರ್ಮಾಪಕರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಇಬ್ಬರು ನಿರ್ಮಾಪಕರು ತೀವ್ರ ಗಾಯಗೊಂಡಿದ್ದಾರೆ.
ಕನ್ನಡ ಸಿನಿಮಾ ರಂಗ ಆರಂಭವಾಗಿ 90 ವರ್ಷ ಕಳೆದಿವೆ. ಈ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸುವ ನಿಟ್ಟಿನಲ್ಲಿ ಈ ಕುರಿತು ಚರ್ಚಿಸಲು ಎಲ್ಲರೂ ಗೋವಾಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿಯೇ ಎಣ್ಣೆ ಪಾರ್ಟಿ ಮಾಡಿ ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ನಿರ್ಮಾಪಕ ಎ.ಗಣೇಶ್, ನಿರ್ಮಾಪಕ ರಥಾವರ ಚಂದ್ರು ಗಾಯಗೊಂಡಿದ್ದಾರೆ. ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಸೂಕ್ತ ಸಮಯದಲ್ಲಿ ಅಂಬ್ಯುಲೆನ್ಸ್ ಬಾರದಿದ್ದರೆ ದೊಡ್ಡ ಅನಾಹುತವೂ ನಡೆಯುತ್ತಿತ್ತು ಎನ್ನಲಾಗಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ ಸುರೇಶ್ ಗೂ ಗಾಯವಾಗಿದೆ. ಸದ್ಯ ಈ ಘಟನೆಗೆ ಸಿನಿ ರಸಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.