ಮುಂಬೈ: ಇತ್ತೀಚೆಗಷ್ಟೇ ಮುಂಬೈನ ಗ್ರಾಹಕರೊಬ್ಬರಿಗೆ ಐಸ್ ಕ್ರೀಂ ತಿನ್ನುವಾಗ ಬೆರಳು ಪತ್ತೆಯಾದ ಪ್ರಕರಣ ನಡೆದಿತ್ತು. ಸದ್ಯ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಈ ಬೆರಳು ಐಸ್ಕ್ರೀಂ ಕಾರ್ಖಾನೆಯ ಕಾರ್ಮಿಕನದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಇಂದಾಪುರ ಐಸ್ಕ್ರೀಂ ಘಟಕದಲ್ಲಿ ಕೆಲಸ ಮಾಡುವ ಓಂಕಾರ್ ಪೋಟೆ ಎಂಬ ಕಾರ್ಮಿಕನ ಬೆರಳು ಮೇ 11ರಂದು ಕೆಲಸ ಮಾಡುವಾಗ ಕತ್ತರಿಸಿದೆ. ನಂತರ ಅದು ಕೋನ್ ಒಳಗೆ ಸೇರಿ ಪ್ಯಾಕ್ ಆಗಿ ಮಾರಾಟವಾಗಿದೆ ಎಂದು ಪೊಲೀಸರು ತನಿಖೆಯಿಂದ ಬಹಿರಂಗ ಪಡಿಸಿದ್ದಾರೆ.
ಜೂ.12ರಂದು ವೈದ್ಯರೊಬ್ಬರು ಈ ಐಸ್ಕ್ರೀಂ ಖರೀದಿಸಿದ್ದರು. ತಿನ್ನುವಾಗ ಬೆರಳು ಸಿಕ್ಕಿತ್ತು. ಇದರಿಂದ ಗಾಬರಿಗೊಂಡ ಅವರು ಮಲಾಡ್ ಪೊಲೀಸ್ ಠಾಣೆಗೆ ಈ ಕುರಿತು ದೂರು ದಾಖಲಿಸಿದ್ದರು. ತನಿಖೆ ವೇಳೆ ಐಸ್ಕ್ರೀಂ ಕಾರ್ಖಾನೆ ಕಾರ್ಮಿಕನ ಬೆರಳು ತುಂಡಾಗಿದ್ದ ಮಾಹಿತಿ ಸಿಕ್ಕಿದೆ. ಅವನ ಡಿಎನ್ ಯ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಐಸ್ ಕ್ರೀಂನಲ್ಲಿ ಪತ್ತೆಯಾದ ಬೆರಳು ಆತನದ್ದೇ ಎಂದು ಖಚಿತಪಡಿಸಿಕೊಳ್ಳಲಾಗಿದೆ.
ಪ್ಯಾಕ್ಡ್ ಆಹಾರ ಮತ್ತು ಸರಕು ಪದಾರ್ಥಗಳಲ್ಲಿ ಪ್ರಾಣಿಗಳು ಮತ್ತು ಮಾನವರ ಮಾಂಸಗಳು ಪತ್ತೆಯಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.