ನವದೆಹಲಿ: ವ್ಯಕ್ತಿಯೊಬ್ಬ ತಾನೇ ಸತ್ತಂತೆ ಕತೆ ಸೃಷ್ಟಿಸಿ ಈಗ 20 ವರ್ಷಗಳ ನಂತರ ಪೊಲೀಸರ ಅತಿಥಿಯಾಗಿದ್ದಾನೆ.
ಮಾಜಿ ನೌಕಾ ಸಿಬ್ಬಂದಿ ಬಾಲೇಶ್ ಕುಮಾರ್ ಬಂಧಿತ ವ್ಯಕ್ತಿ. ಆರೋಪಿಯು ವ್ಯಕ್ತಿಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ಟ್ರಕ್ ಗೆ ಬೆಂಕಿ ಹಚ್ಚಿ ಇಬ್ಬರನ್ನು ಕೊಲೆ ಮಾಡಿದ್ದ ಎನ್ನಲಾಗಿದೆ. ಆನಂತರ ಇದನ್ನು ಅಗ್ನಿ ಅವಘಡ ಎಂದು ಬಿಂಬಿಸಿದ್ದ. ಅಲ್ಲದೇ, ಇದರಲ್ಲಿ ತಾನೂ ಸಾವನ್ನಪ್ಪಿದಂತೆ ಕತೆ ರೂಪಿಸಿದ್ದ. ನಂತರ ತಲೆ ಮರೆಸಿಕೊಂಡು ನಜಾಫ್ಗಢದಲ್ಲಿ ವಾಸಿಸುತ್ತಿದ್ದ. ಸದ್ಯ ತಲೆ ಮರೆಸಿಕೊಂಡಿದ್ದ ಆರೋಪಿ ಬಾಲೇಶ್ ಕುಮಾರ್ನನ್ನು (60) ಪೊಲೀಸರು (Police) ಬಂಧಿಸಿದ್ದಾರೆ.
ನಂತರ ಈತ ತನ್ನ ಹೆಸರನ್ನು ಅಮನ್ ಸಿಂಗ್ ಎಂದು ಬದಲಾಯಿಸಿಕೊಂಡಿದ್ದ. ಈಗ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದ. ಸದ್ಯ ಪೊಲೀಸರು ಹಳೆಯ ಪ್ರಕರಣ ಬೇಧಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ 2004 ರಲ್ಲಿ ದೆಹಲಿಯ (New Delhi) ಸಮಯಪುರ ಬದ್ಲಿಯಲ್ಲಿ ಕುಡಿದ ಮತ್ತಿನಲ್ಲಿ ರಾಜೇಶ್ ಎಂಬ ವ್ಯಕ್ತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ನಂತರ ತನ್ನ ಸಹೋದರ ಸುಂದರ್ ಲಾಲ್ ಮೇಲೆ ಹಲ್ಲೆ ನಡೆಸಿದ್ದ.
ಮೃತ ರಾಜೇಶ್ ಪತ್ನಿಯ ನಡುವೆ ಅನೈತಿಕ ಸಂಬಂಧದ ಕುರಿತು ಜಗಳದಿಂದ ಈ ಗಲಾಟೆ ನಡೆದಿತ್ತು. ಅಲ್ಲಿಂದ ಪರಾರಿಯಾಗಿ ಬಿಹಾರ ಮೂಲದ ಇಬ್ಬರು ಕಾರ್ಮಿಕರನ್ನು ಟ್ರಕ್ನಲ್ಲಿ ಕರೆದೊಯ್ದು ಟ್ರಕ್ಗೆ ಬೆಂಕಿ ಹಚ್ಚಿದ್ದ. ಈ ಅವಘಡದಲ್ಲಿ ತಾನೂ ಸತ್ತಿರುವಂತೆ ಬಂಬಿಸಿ, ತಲೆ ಮರೆಸಿಕೊಂಡಿದ್ದ. ಆನಂತರ ಆತನ ಪತ್ನಿ ವಿಮೆ ಪಡೆದಿದ್ದಳು. ಪಿಂಚಣಿ ಕೂಡ ಅವರಿಗೆ ಬರುತ್ತಿತ್ತು. ಈಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.