ವೋಟರ್ ಐಡಿಗೂ ಆಧಾರ್ ಲಿಂಕ್, ಚುನಾವಣೆಯಲ್ಲಿ ಸುಧಾರಣೆ ತರಲು ಕೇಂದ್ರದ ವಿಧೇಯಕ….
ಚುನಾವಣಾ ಆಯೋಗದ ಸೂಚನೆಯಂತೆ ಚುನಾವಣೆಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಚುನಾವಣಾ ಸುಧಾರಣಾ ವಿಧೇಯಕವನ್ನ ಮಂಡಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಮತದಾರರ ಪಟ್ಟಿಯನ್ನು ಪಾರದರ್ಶಕ ಮತ್ತು ನಿಖರಗೊಳಿಸಲು ಮತದಾರರ ಗುರುತಿನ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಚುನಾವಣಾ ಆಯೋಗ ಶಿಫಾರಸು ಮಾಡಿದೆ. ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಣಿಯಾಗಿರುವ ಮತದಾರರು ಮತ್ತು ನಕಲಿ ಮತದಾರರನ್ನ ಪಟ್ಟಿಯಿಂದ ತೆಗೆದು ಹಾಕಲು ಈ ಕಾಯ್ದೆ ಸಹಾಯ ಮಾಡುತ್ತದೆ. ವಲಸೆ ಕಾರ್ಮಿಕರಿಗೆ ಅವರ ನಿವಾಸದ ನಗರಗಳಲ್ಲಿ ಮತದಾನ ಮಾಡಲು ಚುನಾವಣಾ ಆಯೋಗವು ಉದ್ದೇಶಿಸಿದೆ ಮತ್ತು ಇದನ್ನ ಸಾಕಾರಗೊಳಿಸಲಿದೆ.
ಅಲ್ಲದೇ ಚುನಾವಣೆ ನಡೆಸಲು ಯಾವುದೇ ಶಾಲೆ ಅಥವಾ ಸಂಸ್ಥೆಯ ಕಟ್ಟಡವನ್ನ ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ನೀಡಲು ಕೇಂದ್ರ ತೀರ್ಮಾನಿಸಿದೆ.
ಈ ಹಿಂದೆ ಪುರುಷ ನೌಕರರ ಪತ್ನಿಯರು ಮಾತ್ರ ಅಂಚೆ ಮತದಾನ ಮಾಡಲು ಅವಕಾಶವಿತ್ತು, ಈಗ ಲಿಂಗ ತಾರತಮ್ಯ ತಪ್ಪಿಸಿ ಮಹಿಳಾ ನೌಕರರ ಪತಿಯರಿಗೂ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ.
ಇದು ಒನ್ ನೇಷನ್ ಒನ್ ಡೇಟಾದ ದಿಕ್ಕಿನಲ್ಲೂ ಒಂದು ದೊಡ್ಡ ಹೆಜ್ಜೆಯಾಗಲಿದೆ. ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ, ಜನವರಿ 1ರ ನಂತರ 18 ವರ್ಷ ತುಂಬುವ ಯುವಕರು ವರ್ಷಕ್ಕೆ ನಾಲ್ಕು ಬಾರಿ ಮತದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸುವ ಅವಕಾಶವನ್ನು ಮಸೂದೆ ಹೊಂದಿದೆ.
ಒಟ್ಟು ನಾಲ್ಕು ಚುನಾವಣಾ ಸುಧಾರಣೆಗಳ ತಿದ್ದುಪಡಿಯನ್ನ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ…