ಕುಲ್ದೀಪ್ ಯಾದವ್ ಭರ್ಜರಿ ಸ್ಪಿನ್ ಗೆ ಬಲಿಯಾದ ಇಂಗ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡಿದೆ.
ಪರಿಣಾಮ ಇಂಗ್ಲೆಂಡ್ 218 ರನ್ ಗಳಿಗೆ ಸರ್ವಪತನ ಕಂಡಿದೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಮೊದಲ ಇನ್ನಿಂಗ್ಸ್ ಆರಂಭಿಸಿದ ಝಾಕ್ ಕ್ರಾಲಿ ಹಾಗೂ ಬೆನ್ ಡಕೆಟ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 64 ರನ್ ಪೇರಿಸಿದ ನಂತರ ಡಕೆಟ್ (27) ರನ್ ಗಳಿಸಿ ಕುಲ್ದೀಪ್ ಗೆ ವಿಕೆಟ್ ಒಪ್ಪಿಸಿದರು.
ಇದರ ಬೆನ್ನಲ್ಲಿಯೇ ಒಲೀ ಪೋಪ್ ಕೂಡ 11 ರನ್ ಗಳಿಸಿ ಔಟ್ ಆದರು. ಇನ್ನೊಂದೆಡೆ ಝಾಕ್ ಕ್ರಾಲಿ ಬಿರುಸಿನ ಅರ್ಧಶತಕ ಬಾರಿಸಿದ್ದರು. ಆದರೆ ಕ್ರಾಲಿ ಕೂಡ ಕುಲ್ದೀಪ್ ಯಾದವ್ ಮುಂದೆ ಹೆಚ್ಚು ಹೊತ್ತು ಮೆರೆಯಲಿಲ್ಲ. 79 ರನ್ ಗಳಿಸಿದಾಗ ಔಟ್ ಆದರು. ಬೆನ್ನಲ್ಲೇ ಜಾನಿ ಬೈರ್ಸ್ಟೋವ್ (29) ಹಾಗೂ ಜೋ ರೂಟ್ (26) ವಿಕೆಟ್ ಒಪ್ಪಿಸಿದರು.
ಈ ವೇಳೆ 175 ರನ್ ಗಳಿಸಿದ ವೇಳೆಗೆ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ನಾಯಕ ಸ್ಟೋಕ್ಸ್ ಶೂನ್ಯಕ್ಕೆ ಔಟ್ ಆದರು. ಈ ಮೂಲಕ ಯಾದವ್ 5 ವಿಕೆಟ್ ಗಳ ಸಾಧನೆ ಮಾಡಿದರು. ಅಂತಿಮವಾಗಿ ಇಂಗ್ಲೆಂಡ್ ತಂಡವು 218 ರನ್ ಗಳಿಗೆ ಆಲ್ ಔಟ್ ಆಯಿತು. ಭಾರತದ ಪರ ಕುಲ್ದೀಪ್ ಯಾದವ್ 5 ವಿಕೆಟ್ ಕಬಳಿಸಿದರೆ, ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು.








