ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಮೊದಲ ಬಜೆಟ್ ಇಂದು ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
ಉದ್ಯೋಗ ಮತ್ತು ಬೆಲೆ ಏರಿಕೆ ಸೇರಿದಂತೆ ವಿಪಕ್ಷಗಳ ಹಲವು ಪ್ರಶ್ನೆಗಳ ಮಧ್ಯೆಯೂ ನಿರ್ಮಲಾ ಸೀತಾರಾಮನ್ (Nirmala Sitharaman) ಮೋದಿ 3.0 ಸರ್ಕಾರದ ಮೊದಲ ಕೇಂದ್ರ ಬಜೆಟ್ (Union Budget 2024) ಮಂಡಿಸಲಿದ್ದಾರೆ.
ಈ ಮೂಲಕ ನಿರ್ಮಲಾ ಸೀತಾರಾಮನ್ ದಾಖಲೆಯ ಸತತ 7ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಸತತ ಬಾರಿ ಬಜೆಟ್ ಮಂಡಿಸಿದ್ದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆ ಮುರಿಯಲಿದ್ದಾರೆ. ಆದರೆ, ಸತತ ಅಲ್ಲದೇ ಒಟ್ಟು 11 ಬಾರಿ ಮೊರಾರ್ಜಿ ದೇಸಾಯಿ ಬಜೆಟ್ ಮಂಡಿಸಿದ್ದಾರೆ.
ಹೊಸ ಉತ್ಪಾದನಾ ಸೌಲಭ್ಯಗಳಿಗೆ ತೆರಿಗೆ ಪ್ರೋತ್ಸಾಹ ನೀಡುವ ಸಾಧ್ಯತೆಯಿದೆ. ಉದ್ಯೋಗಗಳನ್ನು ಸೃಷ್ಟಿಸಲು ಕ್ಷೇತ್ರಗಳಾದ್ಯಂತ ಸ್ಥಳೀಯ ಸಂಗ್ರಹಣೆಯನ್ನು ಉತ್ತೇಜಿಸುವ ಸಾಧ್ಯತೆಯಿದೆ. ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸುತ್ತಾರೆಯೇ ಎಂಬುದು ಅವರ ಬಜೆಟ್ ಭಾಷಣದಲ್ಲಿ ಬಹು ನಿರೀಕ್ಷಿತ ಭಾಗವಾಗಿದೆ.
ಬಜೆಟ್ ವಿತ್ತೀಯ ಕೊರತೆಯು ಶೇ.4.5 ರಷ್ಟಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಶೇ.5.8 ರಷ್ಟಿತ್ತು. ಪೂರ್ಣ ಬಜೆಟ್ ಮೊದಲಿನ ವಿತ್ತೀಯ ಕೊರತೆಯ ಪ್ರಕ್ಷೇಪಗಳಿಗಿಂತ ಉತ್ತಮವಾಗಿದೆ ಎಂದು ನಿರೀಕ್ಷಿಸಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಮೋದಿ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಸರ್ಕಾರದ ಯೋಜಿತ ಬಂಡವಾಳ ವೆಚ್ಚವು (ಕ್ಯಾಪೆಕ್ಸ್) 11.1 ಲಕ್ಷ ಕೋಟಿಯಲ್ಲಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ 9.5 ಲಕ್ಷ ಕೋಟಿಗಿಂತ ಹೆಚ್ಚಾಗಿದೆ. ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುತ್ತಿದೆ.








