ಬೆಂಗಳೂರು: ಚನ್ನಪಟ್ಟಣ (Channapatna) ಕ್ಷೇತ್ರದ ಅಭ್ಯರ್ಥಿ ವಿಚಾರ ಬಿಜೆಪಿ- ಜೆಡಿಎಸ್ ದೋಸ್ತಿಯಲ್ಲಿ ಗುದ್ದಾಟ ಶುರುವಾಗಿದೆ. ಈಗಾಗಲೇ ವಿಪ ಸದಸ್ಯ ಸಿ.ಪಿ. ಯೋಗೇಶ್ವರ್ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಈಗಾಗಲೇ ಹೇಳಿದ್ದಾರೆ. ಹೀಗಾಗಿ ದೋಸ್ತಿಯಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೀಶ್ವರ್ (CP Yogeshwar) ಅವರು ಚನ್ನಪಟ್ಟಣದಲ್ಲಿ ತಾವೂ ಸ್ಪರ್ಧಾಕಾಂಕ್ಷಿ ಅಂತಾ ಹೇಳುವುದು ತಪ್ಪಲ್ಲ. ಕ್ಷೇತ್ರದಲ್ಲಿ ಅವರಿಗೆ ಅವರದ್ದೇ ಆದ ಹಿಡಿತ, ಬೆಂಬಲ ಇದೆ. ಆದರೆ ಬಿಜೆಪಿ-ಜೆಡಿಎಸ್ ಪಕ್ಷಗಳು ಒಟ್ಟಾಗಿ ಹೋಗುವ ಸಂದರ್ಭ ಇದು. ಕುಮಾರಸ್ವಾಮಿ ಅಲ್ಲಿ ಆಯ್ಕೆಯಾಗಿದ್ದರು. ಈಗ ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿ- ಜೆಡಿಎಸ್ (BJP-JDS) ಪಕ್ಷಗಳು ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಿದ್ದೇವೆ. ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತು ಸಮಿತಿ ರಚಿಸಿ ಅಭಿಪ್ರಾಯ ಪಡೆದಿದ್ದೇವೆ. ಅಶ್ವಥ್ ನಾರಾಯಣ್ ಅವರ ಸಮಿತಿಯ ವರದಿ ಬಗ್ಗೆ ಮಾಹಿತಿ ಇಲ್ಲ. ನಾನು ಕೂಡ ಅಶ್ವಥ್ ನಾರಾಯಣ್ ಜೊತೆ ಚರ್ಚೆ ಮಾಡುತ್ತೇನೆ. ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.