ಬೆಂಗಳೂರು: ಸಚಿವ ಸಂಪುಟ ಪುನಾರಚನೆ (Cabinet Reshuffle) ವಿಚಾರ ಸಿಎಂಗೆ ಬಿಟ್ಟಿದ್ದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರೊಂದಿಗೆ ಸಮಾಲೋಚನೆ ಮಾಡಿಕೊಂಡು ಮಾಡುವ ಪದ್ಧತಿ ಇದೆ. ಹೈಕಮಾಂಡ್‌ನೊಂದಿಗೆ ಚರ್ಚೆ ಮಾಡಿ, ಸಿಎಂ ಹಾಗೂ ಡಿಸಿಎಂ ನಿರ್ಧಾರ ತೆಗೆದುಕೊಳ್ಳಬಹುದು ಎಂದಿದ್ದಾರೆ.
ಈ ವೇಳೆ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿವಾದಾತ್ಮಕ ಹೇಳಿಕೆಯ ಕುರಿತು ಮಾತನಾಡಿದ ಅವರು, ಸಂವಿಧಾನದಲ್ಲಿ ಪ್ರತಿಯೊಂದು ಸಮುದಾಯಗಳಿಗೆ ಮತ್ತು ಧರ್ಮಗಳಿಗೆ ಕೊಟ್ಟಿರುವ ಹಕ್ಕು ಮತ್ತು ಅವಕಾಶಗಳನ್ನು ಅವರು ಸರಿಯಾಗಿ ನೋಡಿಕೊಂಡಿಲ್ಲ. ಸಂವಿಧಾನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ನಾವು ಮಾತನಾಡುವುದಾಗಲಿ ಅಥವಾ ಕ್ರಮ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳ ಬಗ್ಗೆ ಪಕ್ಷ ಮತ್ತು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಯಾರಿಗೂ ಗೊತ್ತಿಲ್ಲದೇ ಕದ್ದು ಮುಚ್ಚಿ ತೆಗೆದುಕೊಂಡಿರುವ ತೀರ್ಮಾನವೇನಲ್ಲ. ಚುನಾವಣೆಗೂ ಮೊದಲೇ ಪ್ರಣಾಳಿಕೆಯಲ್ಲಿ ತಿಳಿಸಲಾಗಿತ್ತು. ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ಜನಸಮುದಾಯ ನಮ್ಮನ್ನು ನಂಬಿ ಮತ ಚಲಾಯಿಸಿರಬಹುದು. ನಮ್ಮನಮ್ಮ ಅಭಿಪ್ರಾಯಗಳು ಬೇರೆ ಇರಬಹುದು. ನಾವು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು. ಹೀಗಾಗಿ ಶಾಸಕರು ಮನಬಂದಂತೆ ಮಾತನಾಡಬಾರದು ಎಂದಿದ್ದಾರೆ.