ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬೋ ತನ್ನ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಉಪ್ಪಿನಂಗಡಿಯ (Uppinangady) ಪೆರ್ನೆ ಹತ್ತಿರ ನಡೆದಿದೆ. ಪೆರ್ನೆಯ ಬಿಳಿಯೂರು ನಿವಾಸಿ ಹೇಮಾವತಿ (37) ಕೊಲೆಯಾದ ಮಹಿಳೆ. ಹೇಮಾವತಿ ಅವರು ಜೂ. 17ರಂದು ಮಲಗಿದಲ್ಲಿಯೇ ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆದರೆ, ತನಿಖೆಯ ವೇಳೆ 10 ನೇ ತರಗತಿಯ 15 ವರ್ಷದ ಅಪ್ರಾಪ್ತ ಬಾಲಕ ತನ್ನ ಚಿಕ್ಕಮ್ಮನನ್ನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸಾವನ್ನಪ್ಪಿರುವ ಹೇಮಾವತಿಯ ಅಕ್ಕನ ಮಗ ಜೂ. 17ರಂದು ಮನೆಗೆ ಬಂದು ತಂಗಿದ್ದ. ಆದರೆ, ರಾತ್ರಿ ಮಲಗಿದ್ದಾಗ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಚಿಕ್ಕಮ್ಮ ತಡೆದು, ಬುದ್ಧಿಮಾತು ಹೇಳಿದ್ದಾರೆ.
ಆದರೆ, ಈ ಘಟನೆ ಬೆಳಕಿಗೆ ಬರುತ್ತದೆ ಎಂಬ ಭಯದಲ್ಲಿ ಅಪ್ರಾಪ್ತ ಬಾಲಕ ಕತ್ತು ಹಿಸುಕಿ ಕೊಲೆ ಮಾಡಿ ಎಲ್ಲರಿಗೂ ತಾನೇ ಕರೆ ಮಾಡಿ ಚಿಕ್ಕಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾನೆ. ಆದರೆ, ಪೊಲೀಸರಿಗೆ ಇದು ಅನುಮಾನ ಹುಟ್ಟಿಸಿತ್ತು. ತನಿಖೆ ಕೈಗೊಂಡಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.