ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಮನೆಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಗೆ ಬರುತ್ತಿದ್ದಂತೆ ಅಧಿಕಾರಿಯೊಬ್ಬರು ಚಿನ್ನ ಮತ್ತು ಹಣ ಇದ್ದ ಬ್ಯಾಗ್ ನ್ನು ಕಿಟಕಿಯಿಂದ ಪಕ್ಕದ ಮನೆಗೆ ಎಸೆದಿರುವ ಘಟನೆ ನಡೆದಿದೆ.
ಕಾನೂನು ಮಾಪನ ಇಲಾಖೆ ಡೆಪ್ಯುಟಿ ಕಂಟ್ರೋಲರ್ ಅತ್ಹರ್ ಆಲಿ ಎಂಬ ಅಧಿಕಾರಿಯ ನಿವಾಸ ಮತ್ತು ಕಚೇರಿ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 5:30 ರ ಹೊತ್ತಿಗೆ ಕಲ್ಯಾಣ ನಗರದಲ್ಲಿರುವ ನಿವಾಸಕ್ಕೆ ತೆರಳಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು 5 ಗಂಟೆಗೂ ಅಧಿಕ ಕಾಲ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ಸಂದರ್ಭದಲ್ಲಿ ಅತ್ಹರ್ ಆಲಿ ಮನೆಯಲ್ಲಿ ಹಣ, ಚಿನ್ನ ಪತ್ತೆಯಾಗಿದೆ. ಅಧಿಕಾರಿಗಳು ಮನೆಗೆ ಎಂಟ್ರಿ ನೀಡುತ್ತಿದ್ದಂತೆ ಅತ್ಹರ್ ಆಲಿ ಅವರು ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಎಸೆದಿದ್ದರು. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಇವರ ಮೊದಲ ಅಂತಸ್ತು ಇತ್ತು. ಅಲ್ಲಿಂದ ಪಕ್ಕದ ಮನೆ ಕಿಟಕಿ ಒಳಗೆ ಬ್ಯಾಗ್ ಗೆ ತುಂಬಿ ಚಿನ್ನ ಎಸೆದಿದ್ದರು. ಬ್ಯಾಗ್ ಎಸೆದಿದ್ದನ್ನ ನೋಡಿ ನೆರೆಮನೆ ನಿವಾಸಿ ಖುದ್ದು ಅಧಿಕಾರಿಗಳನ್ನು ಕರೆದಿದ್ದಾರೆ. ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ನಂತರ ಅಧಿಕಾರಿಗಳು ಬ್ಯಾಗ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬ್ಯಾಗ್ ತುಂಬಾ ಚಿನ್ನದ ವಸ್ತುಗಳು ಸಿಕ್ಕಿವೆ. ಈಗ ಅಧಿಕಾರಿಗಳು ನೆರೆಮನೆಯಲ್ಲಿ ಕೂಡ ಪರಿಶೀಲನೆ ನಡೆಸಿದ್ದಾರೆ.