ರಾಮನಗರ: ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಗಳ (Rowdy Sheeter) ಮೇಲೆ ಕನಕಪುರ ನಗರ ಪೊಲೀಸರು (Kanakapura City Police) ಗುಂಡಿನ ದಾಳಿ ನಡೆಸಿದ್ದಾರೆ.
ಸಿಪಿಐ ಮಿಥುನ್ ಶಿಲ್ಪಿ ಹಾಗೂ ಪಿಎಸ್ ಐ ಮನೋಹರ್ ಅವರು ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆರೋಪಿಗಳು ಕನಕಪುರ ತಾಲೂಕಿನ ಮಳಗಾಳು ಗ್ರಾಮದ ದಲಿತ (Dalit) ಯುವಕ ಅನೀಶ್ ಎಂಬ ವ್ಯಕ್ತಿಯ ಎಡಗೈ ಕತ್ತರಿಸಿ, ಈ ದುಷ್ಕರ್ಮಿಗಳು ಪರಾರಿಯಾಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಖಚಿತ ಮಾಹಿತಿ ಪಡೆದು ಇಂದು ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಕಗ್ಗಲೀಪುರದ ವ್ಯಾಲಿ ಸ್ಕೂಲ್ ರಸ್ತೆ ಹತ್ತಿರ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಆರೋಪಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಧನಕ್ಕೆ ತೆರಳಿದ್ದಾಗ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಕುಮಾರ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.








