ಓಮಿಕ್ರಾನ್ ಹೊಡೆತಕ್ಕೆ ಕುಸಿದ ಷೇರ್ ಮಾರ್ಕೇಟ್
ಓಮಿಕ್ರಾನ್ ಹೊಡೆತಕ್ಕೆ ಷೇರು ಮಾರುಕಟ್ಟೆ ಖುಣಾತ್ಮಕವಾಗಿ ಸ್ಪಂದಿಸಿದ್ದು ಸೆನ್ಸೆಕ್ಸ್ 1657 ಪಾಯಿಂಟ್‌ಗಳ ಕುಸಿತ, ನಿಫ್ಟಿ 509 ಪಾಯಿಂಟ್‌ಗಳ ಕುಸಿತ ಕಂಡಿದೆ. ಷೇರುಪೇಟೆಯಲ್ಲಿ ವಾರದ ಮೊದಲ ದಿನ ಸೋಮವಾರ ಭಾರಿ ಕುಸಿತ ಕಂಡಿದೆ. ಈ ವೇಳೆ ಸೆನ್ಸೆಕ್ಸ್ 1657 ಅಂಕ ಕಳೆದುಕೊಂಡು 55,354ಕ್ಕೆ ತಲುಪಿದೆ.
ಮುಂಬೈ ಷೇರುಪೇಟೆ (ಬಿಎಸ್‌ಇ) ಸೆನ್ಸೆಕ್ಸ್ 494 ಅಂಕ ಕಳೆದುಕೊಂಡು 56,517ಕ್ಕೆ ವಹಿವಾಟು ಆರಂಭಿಸಿದೆ. ಬೆಳಿಗ್ಗೆ ಮೊದಲ ನಿಮಿಷದಲ್ಲಿ 56,104 ಕ್ಕೆ ಕುಸಿತಗೊಂಡಿತ್ತು. 30 ಸೆನ್ಸೆಕ್ಸ್ ಷೇರುಗಳಲ್ಲಿ ಸನ್ ಫಾರ್ಮಾ ಮಾತ್ರ ಲಾಭ ಗಳಿಸಿದೆ. ಉಳಿದ 29 ಷೇರುಗಳು ಭಾರಿ ಕುಸಿತಕ್ಕೆ ಒಳಗಾಗಿವೆ. ಟಾಟಾ ಸ್ಟೀಲ್ ಮತ್ತು ಎಸ್‌ಬಿಐ 4% ಕ್ಕಿಂತ ಹೆಚ್ಚು ಕುಸಿದರೆ, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಮಹೀಂದ್ರ ಮತ್ತು ಮಹೀಂದ್ರ, ಅಲ್ಟ್ರಾಟೆಕ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಏರ್‌ಟೆಲ್, ಟೆಕ್ ಮಹೀಂದ್ರಾ 3% ಕ್ಕಿಂತ ಹೆಚ್ಚು ಕುಸಿದಿವೆ.
ಮಾರುತಿ, ಎನ್ ಟಿಪಿಸಿ, ಕೊಟಕ್ ಬ್ಯಾಂಕ್, ರಿಲಯನ್ಸ್, ಐಟಿಸಿ, ಟೈಟಾನ್ ಶೇರುಗಳೂ ಶೇ.2 % ಕ್ಕಿಂತ ಹೆಚ್ಚು ನಷ್ಟದೊಂದಿಗೆ ಮಾರುಕಟ್ಟೆಯಲ್ಲಿ ವಹಿವಾಟಾಗುತ್ತಿವೆ. ಸೆನ್ಸೆಕ್ಸ್‌ನ ಬಹುತೇಕ ಎಲ್ಲಾ ಸೂಚ್ಯಂಕಗಳು ಕುಸಿತದಲ್ಲಿವೆ. ಮತ್ತೊಂದೆಡೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ ಕೂಡ 510 ಪಾಯಿಂಟ್‌ಗಳ ಕುಸಿತ ಕಂಡು 16,474 ಕ್ಕೆ ತಲುಪಿದೆ.
ನಿಫ್ಟಿಯ 50 ಷೇರುಗಳ ಪೈಕಿ 48 ಷೇರುಗಳು ಕುಸಿತದಲ್ಲಿದ್ದು, 2 ಮಾತ್ರ ಲಾಭದಲ್ಲಿ ವಹಿವಾಟು ನಡೆಸುತ್ತಿವೆ. ಮಿಡ್ ಕ್ಯಾಪ್, ಫೈನಾನ್ಷಿಯಲ್, ಬ್ಯಾಂಕಿಂಗ್ ಸೂಚ್ಯಂಕಗಳು ಭಾರಿ ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ. ನಿಫ್ಟಿ ಬ್ಯಾಂಕ್ 3%, ಮಿಡ್‌ಕ್ಯಾಪ್ ಸೂಚ್ಯಂಕ 3% ಕುಸಿತಕ್ಕೊಳಗಾಗಿವೆ.
ಓಮಿಕ್ರಾನ್ ಸೋಂಕುಗಳ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿರುವುದು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ವಿದೇಶಿ ಹೂಡಿಕೆದಾರರಿಂದ ಷೇರು ಮಾರಾಟ, ಮತ್ತು ಕೇಂದ್ರ ಬ್ಯಾಂಕ್‌ನಿಂದ ಬಡ್ಡಿದರ ಹೆಚ್ಚಳ ಸುದ್ದಿಗಳು ಸಹ ಕರಡಿ ಕುಣಿತಕ್ಕೆ ಕಾರಣವಾಗಿದೆ.








