ನವದೆಹಲಿ: ಆರೋಪಿಗಳ ಮನೆ ಸೇರಿದಂತೆ ಇನ್ನಿತರ ಆಸ್ತಿ ನಾಶ ಮಾಡುವ ಬುಲ್ಡೋಜರ್ ನ್ಯಾಯದ ಹೆಸರಿನಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಗೆ ಈಗ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ.
ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕಟ್ಟಡಗಳ ತೆರವಿಗೆ ಮಾರ್ಗಸೂಚಿ ಸೂಚಿಸಿದೆ.
ನ್ಯಾ.ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ, ಬುಲ್ಡೋಜರ್ ಕಾರ್ಯಚರಣೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ. ಕಾರ್ಯಾಂಗವು ನ್ಯಾಯಾಂಗವನ್ನು ಅತಿಕ್ರಮಿಸಲು ಸಾಧ್ಯವಿಲ್ಲ. ಆರೋಪಿಯನ್ನು ಅಪರಾಧಿಯನ್ನು ಎಂದು ನಿರ್ಧರಿಸಲು ಅಧಿಕಾರಿಗಳು ನ್ಯಾಯಾಧೀಶರಲ್ಲ. ಕೇವಲ ಆರೋಪದ ಮೇಲೆ ನಾಗರಿಕರ ಮನೆಯನ್ನು ಅನಿಯಂತ್ರಿತವಾಗಿ ಕೆಡವುವುದು ಅಸಾಂವಿಧಾನಿಕ ಎಂದು ಹೇಳಿದ್ದಾರೆ.
ಈ ರೀತಿ ಅಧಿಕಾರ ದುರುಪಯೋಗಪಡಿಸಿಕೊಂಡರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.








