ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ದೋಸ್ತಿ ಮೈಸೂರು ಚಲೋ ಹಮ್ಮಿಕೊಂಡಿದೆ.
ಸಮಾವೇಶದಲ್ಲಿ ಲಕ್ಷಾಂತರ ಜನರನ್ನು ಸೇರಿಸುವ ಗುರಿಯನ್ನೂ ಹಮ್ಮಿಕೊಂಡಿದೆ. ಆದರೆ, ಬಿಜೆಪಿಗೆ ಟಾಂಗ್ ನೀಡಲು ಮುಂದಾಗಿರುವ ಕಾಂಗ್ರೆಸ್ ಕೂಡ ಲಕ್ಷಾಂತರ ಜನರನ್ನು ಸೇರಿಸಲು ಮುಂದಾಗಿದೆ.
ಆಗಸ್ಟ್ 9ರಂದು ಮೈಸೂರಿನಲ್ಲಿ (Mysuru) ಕಾಂಗ್ರೆಸ್ (Congress) ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, 2 ಲಕ್ಷ ಜನ ಸೇರಿಸುವ ಗುರಿ ಹೊಂದಿದೆ. ಬಿಜೆಪಿಯ ಪಾದಯಾತ್ರೆ ಮೈಸೂರು ತಲುಪುವ ದಿನವೇ ಮೈಸೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಜರುಗಲಿದೆ. 6 ಜಿಲ್ಲೆಗಳಲ್ಲಿ ಪ್ರತಿ ಹಳ್ಳಿಗೆ ತಲಾ 2 ಬಸ್ಸಿನಲ್ಲಿ ಜನ ಕರೆತರಲು ಸಹ ಸೂಚನೆ ನೀಡಲಾಗಿದೆ. ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ, ರಾಮನಗರ ಜಿಲ್ಲೆಯ ಪ್ರತಿ ಹಳ್ಳಿಗೆ 2ಬಸ್ ಗಳಲ್ಲಿ ಜನರನ್ನು ಕರೆ ತರುವಂತೆ ಸೂಚಿಸಲಾಗಿದೆ.
ಈಗಾಗಲೇ ಸಿಎಂ ತವರಿನಲ್ಲಿ ಶಕ್ತಿ ಪ್ರದರ್ಶನಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2 ಲಕ್ಷಕ್ಕೂ ಅಧಿಕ ಜನ ಸೇರಿಸುವಂತೆ ಸ್ಥಳೀಯ ನಾಯಕರು ಹಾಗೂ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ಪರ ಶಕ್ತಿ ಪ್ರದರ್ಶನ ಮಾಡಲು 6 ಜಿಲ್ಲೆಯ ನಾಯಕರಿಗೆ ವಿಶೇಷ ಟಾಸ್ಕ್ ನೀಡಲಾಗಿದೆ. ಅಷ್ಟು ಜಿಲ್ಲೆಯ ನಾಯಕರ ಜೊತೆ ಯತೀಂದ್ರ ಸಿದ್ದರಾಮಯ್ಯ ಮಾತುಕತೆ ನಡೆಸುತ್ತಿದ್ದು, ಶತಾಯಗತಾಯ ದೊಡ್ಡಮಟ್ಟದ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಇದಕ್ಕೆ ಬಿಜೆಪಿ ಯಾವ ರೀತಿ ಟಾಂಗ್ ಕೊಡಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.