ಮಂಗಳವಾರ ಮೂರನೇ ಹಂತದ ಮತದಾನ ನಡೆದಿದೆ. ಈ ವೇಳೆ ಚುನಾವಣೆ ಮುಗಿದ ನಂತರ ಇವಿಎಂ(EVM) ಯಂತ್ರಗಳು ಹಾಗೂ ಮತಗಟ್ಟೆ ಸಿಬ್ಬಂದಿ ಸಾಗಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಮಧ್ಯಪ್ರದೇಶದ ಬೇತುಲ್ ನಲ್ಲಿ ನಡೆದಿದೆ. ಘಟನೆಯಲ್ಲಿ ಕೆಲವು ಇವಿಎಂ ಯಂತ್ರಗಳಿಗೆ ಹಾನಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ ಎಂದು ಬೇತುಲ್ ಜಿಲ್ಲಾಧಿಕಾರಿ ನರೇಂದ್ರ ಸೂರ್ಯವಂಶಿ ಹೇಳಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದೆ. ಘಟನೆಯಲ್ಲಿ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸುಟ್ಟ ಬಸ್ ನಲ್ಲಿ 6 ಮತಗಟ್ಟೆಗಳ ಇವಿಎಂಗಳು ಇದ್ದವು ಎನ್ನಲಾಗಿದೆ. ಹಾನಿಗೊಳಗಾದ ಮತಗಟ್ಟೆಗಳಲ್ಲಿ ಮರು ಮತದಾನದ ಬಗ್ಗೆ ಚುನಾವಣಾ ಸಂಸ್ಥೆ ನಿರ್ಧಾರ ಕೈಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ. ಬಸ್ ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಬಸ್ ನಲ್ಲಿದ್ದವರು ಹಿಂದಿನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.