ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಟ್ರೋಲ್ ಗೆ ಒಳಗಾಗುತ್ತಿದೆ. ರಾಮನ ಚರಿತ್ರೆಯನ್ನು ಈ ಚಿತ್ರ ಒಳಗೊಂಡಿದ್ದರೂ ಅಭಿಮಾನಿಗಳು ಸರಿಯಾಗಿ ಮೂಡಿ ಬಂದಿಲ್ಲ ಎಂದು ಟೀಕಿಸುತ್ತಿದ್ದಾರೆ. ಸಿನಿಮಾ ಸರಿಯಾಗಿ ಮೂಡಿಬಂದಿಲ್ಲ ಎಂಬ ಕಾರಣಕ್ಕೆ ನಿರ್ದೇಶಕ ಓಂ ರಾವತ್ (Om Raut) ರನ್ನು ಎಲ್ಲರೂ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ನಟ ಅರುಣ್ ಗೋವಿಲ್ ಅವರು ಹಳೆಯ ನೆನಪನ್ನು ಹೇಳಿದ್ದಾರೆ. ಅರುಮ್ ಗೋವೆಲ್ ಅವರು 1988ರಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸಿದ್ದರು. ಜೀ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಅರುಣ್ ಗೋವಿಲ್, ರಾಮಾಯಣ ಸೀರಿಯಲ್ ಶೂಟಿಂಗ್ ಸಂದರ್ಭದಲ್ಲಿ ನಾನು ಮೇಕಪ್ ಹಾಕಿಕೊಂಡು ಕುಳಿತಿದ್ದೆ. ಆಗ ಓರ್ವ ಮಹಿಳೆ ತನ್ನ ಮಗುವನ್ನು ಕರೆದುಕೊಂಡ ಬಂದು ನನ್ನ ಕಾಲಿನ ಮೇಲೆ ಹಾಕಿ, ದಯವಿಟ್ಟು ಅದರ ಜೀವ ಉಳಿಸುವಂತೆ ಬೇಡಿಕೊಂಡಳು.
ಮೊದಲು ಆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ನಾನು ಹೇಳಿದೆ. ನಾನು ಕೂಡ ಆ ಮಗುವಿಗಾಗಿ ಪ್ರಾರ್ಥಿಸಿದೆ. ನನ್ನ ಕೈಯನ್ನು ತೆಗೆದುಕೊಂಡು ಮಗುವಿನ ತಲೆಯ ಮೇಲೆ ಆಕೆ ಇರಿಸಿದಳು. ಆನಂತರ ಮೂರು ದಿನಗಳ ಬಳಿಕ ಅವರು ಮತ್ತೆ ಬಂದರು. ಮಗು ಗುಣಮುಖವಾಗಿ ತಾಯಿಯೊಂದಿಗೆ ನಡೆದುಕೊಂಡು ಬಂದಿತ್ತು. ಇದರಲ್ಲಿ ನನ್ನ ಪಾಲು ಇರಲಿಲ್ಲ. ಇದೆಲ್ಲ ನಡೆದಿದ್ದು, ಆಕೆ ರಾಮನಲ್ಲಿ ಇಟ್ಟಿದ್ದ ನಂಬಿಕೆಯಿಂದ. ಇಂದು ಕೂಡ ಚಿತ್ರ ಮಾಡುವವರು ಇಂತಹ ನಂಬಿಕೆ ಇಟ್ಟುಕೊಂಡಿರಬೇಕು ಎಂದು ಹೇಳಿದ್ದಾರೆ.








