ಕುಸ್ತಿಪಟುಗಳನ್ನು ಸರ್ಕಾರ, ಪೊಲಿಸರು ನಡೆಸಿಕೊಳ್ಳುತ್ತಿರುವ ಕುರಿತು ದೇಶದಲ್ಲಿ ಅಷ್ಟೇ ಅಲ್ಲದೇ, ವಿಶ್ವದಾದ್ಯಂತ ಟೀಕೆಗಳು ವ್ಯಕ್ತವಾಗಿದ್ದು, ವಿಶ್ವ ಕುಸ್ತಿ ಸಂಸ್ಥೆಯು ಭಾರತೀಯ ಕುಸ್ತಿ ಫೆಡರೇಷನ್‌ಗೆ ಎಚ್ಚರಿಕೆ ನೀಡಿದೆ. ಕ್ರೀಡಾಪಟುಗಳ ಮೇಲೆ ನಡೆದ ಹಲ್ಲೆಗೆ ಖಂಡನೆ ವ್ಯಕ್ತಪಡಿಸಿರುವ ವಿಶ್ವಮಟ್ಟದ ಕುಸ್ತಿ ಆಡಳಿತ ಸಂಸ್ಥೆಯಾದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (UWW) ಭಾರತಕ್ಕೆ ಎಚ್ಚರಿಕೆ ನೀಡಿದೆ.
ವಿಶ್ವ ಕುಸ್ತಿ ಆಡಳಿತ ಮಂಡಳಿ (ಯುಡಬ್ಲ್ಯೂಡಬ್ಲ್ಯು) ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ)ದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಕುಸ್ತಿಪಟುಗಳನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿದೆ. ನವದೆಹಲಿಯ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳನ್ನು ತಾತ್ಕಾಲಿಕವಾಗಿ ಬಂಧಿಸಿರುವ ಕುರಿತು ನಿರಾಶೆಯನ್ನು ವ್ಯಕ್ತಪಡಿಸಿ, ಇತ್ತೀಚಿನ ಘಟನೆಗಳನ್ನು ಆಡಳಿತವು ಗಮನಿಸಿದೆ ಎಂದು ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಬೇಸರ ವ್ಯಕ್ತಪಡಿಸಿದೆ.
ಮುಂದಿನ ಚುನಾಯಿತ ಸಾಮಾನ್ಯ ಸಭೆಯ ಕುರಿತು ಮಾಹಿತಿ ನೀಡದಿದ್ದರೆ ಭಾರತದ ಕುಸ್ತಿ ಫೆಡರೇಶನ್ ಅನ್ನು ಅಮಾನತುಗೊಳಿಸುವುದಾಗಿ ವಿಶ್ವ ಕುಸ್ತಿ ಆಡಳಿತ ಮಂಡಳಿ ಬೆದರಿಕೆ ಹಾಕಿದೆ. ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೇರಿದಂತೆ ವಿಶ್ವ ಪದಕ ವಿಜೇತೆ ವಿನೇಶ್ ಫೋಗಟ್, WFI ಮಾಜಿ ಮುಖ್ಯಸ್ಥ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ್ದಾರೆ. ಮೇ 30 ರ ಮಂಗಳವಾರದಂದು ಭಾರತದ ಅಗ್ರ ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಮುಳುಗಿಸುವುದಾಗಿ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ ವಿಶ್ವ ಕುಸ್ತಿ ಆಡಳಿತ ಮಂಡಳಿ ಹೇಳಿಕೆ ಬಂದಿದೆ.