ವೈದ್ಯರಿಗೆ ರೋಗಿಗಳನ್ನು ನೋಡುವುದೇ ಕಾಯಕ. ಆದರೆ, ಇಲ್ಲೊಬ್ಬ ವೈದ್ಯನಿಗೆ ಕುಡಿಯುವುದೇ ಕಾಯಕವಾಗಿ ಬಿಟಟ್ದೆ. ಅದು ಬಿಟ್ಟು ಮತ್ತೆ ಬೇರೆ ಕೆಲಸ ಎಂದರೆ ಸಿಗರೇಟು ಸೇದುವುದು. ಆದರೆ, ಆಸ್ಪತ್ರೆಗೆ ಇವರೇ ಮುಖ್ಯಸ್ಥರು. ಒಂದು ದಿನವೂ ಆಸ್ಪತ್ರೆಗೆ ಬರುವುದಿಲ್ಲ. ಬಂದರೂ ಫುಲ್ ಟೈಟ್ ಆಗಿಯೇ ಬರುವುದು.
ಹೀಗಾಗಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕ್ವಾಟಗುಡ್ಡ ಗ್ರಾಮದಲ್ಲಿನ ಜನ ಬೇಸತ್ತು ಹೋಗಿದ್ದಾರೆ. ಕೋಟಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಮಾಂಜಿನಪ್ಪ ಪ್ರತಿ ದಿನವೂ ಕುಡಿಯುತ್ತಾರೆ. ಬೆಳ್ಳಂಬೆಳಿಗ್ಗೆ ಕುಡಿದು ಡ್ಯೂಟಿಗೆ ಹಾಜರಾಗುತ್ತಾರೆ ಎಂದು ಸಿಟ್ಟಿಗೆದ್ದು ಗ್ರಾಮಸ್ಥರು ಅವರನ್ನು ರೆಡ್ ಹ್ಯಾಂಡಾಗಿಯೇ ಹಿಡಿಯಲು ಸನ್ನದ್ಧರಾಗಿದ್ದರು. ಈ ವ್ಯಕ್ತಿಯ ಬಗ್ಗೆ ಹಲವು ಬಾರಿ ಜನರು ಮೇಲಾಧಿಕಾರಿಗಳಿಗೆ ದೂರು ನೀಡಿದರು. ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಇವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಯತ್ನಿಸಿರುವ ಜನರು, ವಿಡಿಯೋ ಮಾಡಿದ್ದಾರೆ.
ವೈದ್ಯಾಧಿಕಾರಿಗೆ ಆಸ್ಪತ್ರೆಗೆ ಬಂದಿರುವುದಾಗಿ ಸಹಿ ಇದೆ. ಆದರೆ, ಆಸ್ಪತ್ರೆಗೆ ಬಂದಿರಲಿಲ್ಲ. ಜನರೆಲ್ಲ ಸೇರಿ ಹೋಗಿ ನೋಡಿದರೆ ರಾಮಾಂಜಿನಪ್ಪ ಎಂದಿನ ಚಾಳಿಯಂತೆ ಎಣ್ಣೆ ಹೊಡೆಯುತ್ತಿರುವುದು ಕಂಡು ಬಂದಿದೆ. ಕೂಡಲೇ ಸ್ಥಳಕ್ಕೆ ಪೊಲೀಸರು ಬಂದಿದ್ದರು. ಜನರೆಲ್ಲ ಆಸ್ಪತ್ರೆಗೆ ನುಗ್ಗಿ ನೋಡಿದಾಗ ಮದ್ಯದ ಬಾಟಲಿ, ಪ್ಯಾಕ್ ಪ್ಯಾಕ್ ಸಿಗರೇಟುಗಳು ಆಸ್ಪತ್ರೆಯಲ್ಲಿ ಪತ್ತೆಯಾಗಿವೆ.