ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರ ಮ್ಯಾನೇಜರ್ ಗೆ ಲಕ್ಷ ಲಕ್ಷ ವಂಚಿಸಿರುವ ಘಟನೆಯೊಂದು ನಡೆದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಾನ್ ಅವರ ಪಿಎ ಎಂದು ಹೇಳಿಕೊಂಡು ತಿರುಪತಿ ವಿಶೇಷ ದರ್ಶನದ (Tirupati Special Darshan) ಹೆಸರಿನಲ್ಲಿ ವಂಚಿಸಲಾಗಿದೆ. ಈ ಕುರಿತು ಮ್ಯಾನೇಜರ್ ಸ್ವಾಮಿನಾಥನ್ ಶಂಕರ್ ಅವರು ಸಿಲಿಕಾನ್ ಸಿಟಿಯ ಹೆಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ನಾನು ನಕುಲ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಪ್ತ ಸಹಾಯಕ ಎಂದು ಪರಿಚಯ ಮಾಡಿ ನ್ಯಾಯಾಧೀಶ ಕೆಸಿ ಭಾನು ಅವರ ಮಗ ಸಂದೀಪ್ ಅವರು ಧೋನಿ ಭೇಟಿ ಮಾಡಬೇಕು ಕೇಳಿದ್ದರು. ಆನಂತರ ಅ. 29 ರಂದು ಸಂದೀಪ್ ಅವರು ಬಂಗಾಳದ ಹೋಟೆಲಿನಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಯಾವಾಗ ಬೇಕಾದರೂ ತಿರುಪತಿ ವಿಶೇಷ ದರ್ಶನ ಮಾಡಿಸುವುದಾಗಿ ಹೇಳಿದ್ದರು. ನ. 30 ರಂದು ನನಗೆ ಕರೆ ಮಾಡಿ 12 ಮಂದಿಗೆ ವಿಶೇಷ ದರ್ಶನದ ಪಾಸ್ ನೀಡಲಾಗುವುದು ಎಂದು ತಿಳಿಸಿದ್ದರು. ಆಗ ನಾನು ದುಬೈನಲ್ಲಿ ಇದ್ದೆ.
ಬೇರೆಯವರಿಗೆ ಕೊಡಿ ಎಂದಾಗ ನೀವೇ ಯಾರಿಗಾದರೂ ಪ್ರೊಟೋಕಾಲ್ ಲೆಟರ್ ನೀಡಿ ಎಂದು ಹೇಳಿದ್ದರು. ಹೀಗಾಗಿ ನಾನು ಕೂಡ್ಲುಗೇಟ್‌ನಲ್ಲಿ ಶಾಲೆ ನಡೆಸುತ್ತಿದ್ದ ಸ್ನೇಹಿತನಾದ ವಿನೀತ್ ಚಂದ್ರಶೇಖರ್‌ಗೆ ಕರೆ ಮಾಡಿದ್ದೆ. ಆನಂತರ ನಾಗೇಶ್ವರ್ ರಾವ್ ಎಂಬ ವ್ಯಕ್ತಿ ಕರೆ ಮಾಡಿ ಸಾಯಿ ಕ್ರಿಯೇಷನ್‌ಗೆ ಹಣ ಹಾಕಿ ಎಂದು ಹೇಳಿದ್ದಾರೆ. ವಿಶೇಷ ದರ್ಶನ ರೂಮ್ ಸೇರಿದಂತೆ ಇನ್ನಿತರ ಖರ್ಚುಗಳಿಗೆ 3 ಲಕ್ಷ ರೂ. ಹಣ ಹಾಕಿ ಎಂದು ಹೇಳಿದ್ದಾರೆ. ವಿನೀತ್ ಚಂದ್ರಶೇಖರ್ ಅವರು 3 ಲಕ್ಷ ರೂ. ಹಣವನ್ನು ಗೂಗಲ್ ಪೇ ಮಾಡಿದ್ದಾರೆ. ಆದರೂ ದರ್ಶನ ಸಿಕ್ಕಿರಲಿಲ್ಲ. ಒಟ್ಟು 6,33,333 ರೂ. ಹಣ ವರ್ಗಾವಣೆಯಾಗಿದ್ದು, ಮರಳಿ ನೀಡುತ್ತೇವೆಂದು ನೀಡಿಲ್ಲ ಎಂದು ಆರೋಪಿಸಿದ್ದಾರೆ.