ಬೆಂಗಳೂರು : ದೇಶದಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದ್ದರೂ, ಕೇಂದ್ರ ಸರ್ಕಾರ ವೆಂಟಿಲೇಟರ್ ರಫ್ತಿಗೆ ಮುಂದಾಗಿದ್ದು, ಈ ಬಗ್ಗೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಕರ್ನಾಟಕದಲ್ಲಿ ಪ್ರತಿದಿನ 5000ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಸರಾಸರಿ 80-90 ಮಂದಿ ಸಾಯುತ್ತಿದ್ದಾರೆ. ಸಚಿವ ಸುಧಾಕರ್ ಪ್ರಕಾರ ಕೊರೊನಾ ಸಾವಿನ ಪ್ರಮಾಣ ಇಳಿಯುತ್ತಿದೆಯಂತೆ. ಅದಕ್ಕಾಗಿ ವೆಂಟಿಲೇಟರ್ ರಫ್ತಿಗೆ ಅವಕಾಶಕ್ಕೆ ಕೊಡ್ತಾರಂತೆ. ಹೃದಯಹೀನ ಸರ್ಕಾರ”.
“ರಾಜ್ಯದಲ್ಲಿ ಕೊರೊನಾ ಸಾವು ಹೆಚ್ಚಳಕ್ಕೆ ವೆಂಟಿಲೇಟರ್ ಕೊರತೆಯೂ ಒಂದು ಕಾರಣ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳು 57,396. ಲಭ್ಯ ಇರುವ ವೆಂಟಿಲೇಟರ್ ಗಳು ಕೇವಲ 801. ಒಟ್ಟು ರಾಜ್ಯದ ಸ್ಥಿತಿ ಇನ್ನೂ ಚಿಂತಾಜನಕ. ನರೇಂದ್ರ ಮೋದಿ ಸರ್ಕಾರಕ್ಕೆ ರಫ್ತು ಹೆಚ್ಚಿಸುವ ಚಿಂತೆ” ಎಂದು ಸಿದ್ದರಾಮಯ್ಯ ಜರಿದಿದ್ದಾರೆ.