ಕೇಪ್‌ಟೌನ್: ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಜಯ ಸಾಧಿಸಿದ್ದು, ಮೊದಲ ಸೋಲಿನ ಸೇಡನ್ನು ಕೂಡ ತೀರಿಸಿಕೊಂಡಿದೆ.
ಬೌಲಿಂಗ್ ಬಿಗಿ ದಾಳಿಯಿಂದಾಗಿ ಭಾರತ ಗೆಲುವು ಸಾಧಿಸಿದ್ದು, ಜಸ್ಪ್ರೀತ್ ಬುಮ್ರಾ (Jasprit Bumrah), ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ಗೆ ದಕ್ಷಿಣ ಆಫ್ರಿಕಾ ತಂಡ ತತ್ತರಿಸಿ ಹೋಗಿದೆ. ಈ ಮೂಲಕ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್‌ಗಳ ಐತಿಹಾಸಿಕ ಜಯ ಸಾಧಿಸಿದೆ. ಈ ಮೂಲಕ ತವರಿನಲ್ಲಿಯೇ ಹರಿಣರನ್ನು 1-1ರಲ್ಲಿ ಸರಣಿ ಸಮಬಲದಲ್ಲಿ ಬಗ್ಗು ಬಡಿಯಿತು.
ಅಲ್ಲದೇ, ಈ ಗೆಲುವಿನ ಮೂಲಕ ರೋಹಿತ್ ಶರ್ಮಾ (Rohit Sharma) ಕೇಪ್‌ಟೌನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ನಾಯಕ ಎಂಬ ಕೀರ್ತಿ ಗಳಿಸಿದ್ದಾರೆ. ಎಂ.ಎಸ್ ಧೋನಿ ನಂತರ ದಕ್ಷಿಣ ಆಫ್ರಿಕಾದಲ್ಲಿ (South Africa) ಟೆಸ್ಟ್ ಸರಣಿಯನ್ನು ಸಮಬಲಗೊಳಿಸಿದ 2ನೇ ಭಾರತೀಯ ನಾಯಕ ಎಂಬ ಗರಿಮೆ ಕೂಡ ರೋಹಿತ್ ಹೆಸರಿಗೆ ಬಂದಿದೆ.
ಎರಡನೇ ಟೆಸ್ಟ್ ಪಂದ್ಯವು ಕೇವಲ ಎರಡೇ ದಿನಗಳಲ್ಲಿ ಮುಕ್ತಾಯಗೊಂಡಿದೆ. ಈ ಮೂಲಕ ಇದು ಇತಿಹಾಸದಲ್ಲಿಯೇ ಅತ್ಯಂತ ಚುಟುಕು ಪಂದ್ಯ ಎನಿಸಿಕೊಂಡಿದೆ. ಎರಡೂ ಇನ್ನಿಂಗ್ಸ್‌ಗಳಿಂದ ಒಟ್ಟು 642 ಎಸೆತಗಳು ದಾಖಲಾದವು. 1932ರಂದು ಮೆಲ್ಬರ್ನ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ 656 ಎಸೆತಗಳು ಹಾಗೂ 1935ರಲ್ಲಿ ಬ್ರಿಡ್ಜ್‌ಟೌನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ 672 ಎಸೆತಗಳು ದಾಖಲಾಗಿದ್ದೇ ಇತಿಹಾಸವಾಗಿತ್ತು. ಈ ಮೂಲಕ ಮೊದಲ ಟೆಸ್ಟ್ ನ ಸೇಡನ್ನು ಭಾರತ ತಂಡ ಎರಡನೇ ಪಂದ್ಯದಲ್ಲಿ ತೀರಿಸಿಕೊಂಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ದಾಳಿಗೆ ತುತ್ತಾದ ದಕ್ಷಿಣ ಆಫ್ರಿಕಾ ಕೇವಲ 55 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನಟ್ಟಿದ ಭಾರತ ತಂಡ ಕೂಡ 153 ರನ್‌ಗಳಿಗೆ ಆಲೌಟ್ ಆಯಿತು. ಪುನಃ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ 36.5 ಓವರ್‌ಗಳಲ್ಲಿ 176 ರನ್‌ಗಳಗೆ ಸರ್ವಪತನ ಕಂಡಿತು. ಹೀಗಾಗಿ ಭಾರತಕ್ಕೆ ಕೇವಲ ಇದರಿಂದ ಟೀಂ ಇಂಡಿಯಾಕ್ಕೆ 79 ರನ್‌ಗಳ ಗುರಿ ಸಿಕ್ಕಿತ್ತು. ಆದರೆ, ಈ ಪಂದ್ಯದಲ್ಲಿ ಏಡನ್ ಮಾರ್ಕ್ರಮ್ 103 ಎಸೆತಗಳಲ್ಲಿ 2 ಸಿಕ್ಸರ್, 17 ಬೌಂಡರಿಯೊಂದಿಗೆ 106 ರನ್ ಗಳಿಸಿದರು. ಉಳಿದಂತೆ ಯಾವ ಆಟಗಾರರು ಹೆಚ್ಚಿನ ರನ್ ಗಳಿಸಲು ಪರದಾಡಿದರು.
79 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ, ನಾಯಕ ರೋಹಿತ್ ಶರ್ಮಾ ಅವರ ತಾಳ್ಮೆಯ ಬ್ಯಾಟಿಂಗ್‌ನಿಂದ 12 ಓವರ್‌ಗಳಲ್ಲಿಯೇ 3 ವಿಕೆಟ್ ಕಳೆದುಕೇಡು 80 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಬುಮ್ರಾ 6 ವಿಕೆಟ್ ಪಡೆದರೆ, ಮುಕೇಶ್ ಕುಮಾರ್ 2, ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.








