ಬೆಂಗಳೂರಿನಲ್ಲಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾದ ಮತ್ತೊಂದು ಬೆಳವಣಿಗೆ ನಡೆದಿದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿರುವ ಸುದ್ದಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಅವರು ಆರ್‌ಎಸ್‌ಎಸ್ ವಿರುದ್ಧ ನೀಡಿದ ಹೇಳಿಕೆಗಳ ನಂತರ ಈ ಕರೆಗಳು ಬಂದಿರುವುದಾಗಿ ಮೂಲಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸರ್ಕಾರ ಈ ವಿಷಯವನ್ನು ತೀವ್ರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.
ಯಾರು ಬೆದರಿಕೆ ಹಾಕಿದ್ದಾರೆ, ಯಾವ ಸ್ಥಳದಿಂದ ಕರೆ ಬಂದಿದೆ, ಅದರ ಹಿಂದಿನ ಉದ್ದೇಶ ಏನು ಎನ್ನುವುದನ್ನು ಸರ್ಕಾರ ಸಂಪೂರ್ಣ ತನಿಖೆ ಮಾಡುತ್ತದೆ. ಯಾವ ವ್ಯಕ್ತಿಯ ಅಭಿಪ್ರಾಯವೇ ಆಗಿರಲಿ, ಅದಕ್ಕೆ ಪ್ರತಿಯಾಗಿ ಬೆದರಿಕೆ ಹಾಕುವುದು ಕಾನೂನಿನ ವಿರುದ್ಧದ ಕೃತ್ಯ, ಎಂದು ಪರಮೇಶ್ವರ್ ಹೇಳಿದ್ದಾರೆ.
ಒಬ್ಬ ಸಚಿವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿರಬಹುದು. ಆದರೆ ಅದು ಸರ್ಕಾರದ ತೀರ್ಮಾನ ಅಥವಾ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ಸರ್ಕಾರದ ನಿಲುವು ಸ್ಪಷ್ಟವಾಗಿದ್ದು, ಯಾವುದೇ ರೀತಿಯ ಬೆದರಿಕೆ ಅಥವಾ ಹಿಂಸಾತ್ಮಕ ಕ್ರಮವನ್ನು ಸಹಿಸಲಿಕ್ಕೆ ಅವಕಾಶ ಇಲ್ಲ, ಎಂದು ಅವರು ಹೇಳಿದ್ದಾರೆ.
ಇದೀಗ ಪೊಲೀಸರು ಕರೆಗಳ ಮೂಲ ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ. ತಾಂತ್ರಿಕ ಸಹಾಯದೊಂದಿಗೆ ಸೈಬರ್ ಸೆಲ್ ಕೂಡಾ ತನಿಖೆಗೆ ಕೈಜೋಡಿಸಿದೆ ಎಂದು ತಿಳಿದುಬಂದಿದೆ.
ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ಆರ್‌ಎಸ್‌ಎಸ್ ಹಾಗೂ ಅದರ ಚಟುವಟಿಕೆಗಳ ಕುರಿತು ಮಾಡಿದ ಟೀಕೆಯು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.
ಸರ್ಕಾರ ಈಗ ಈ ಪ್ರಕರಣವನ್ನು ಸಾರ್ವಜನಿಕ ಸುರಕ್ಷತೆ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಇಲಾಖೆ ತಿಳಿಸಿದೆ.








