ಕೆಜಿಎಫ್ ಬಾಬುಗೆ ಟಿಕೆಟ್ | ಡಿಕೆಶಿ ಅವರೇ ಎಷ್ಟು ಕೋಟಿಗೆ ಸೀಟ್ ಡೀಲ್ ಮಾಡಿಕೊಂಡಿದ್ದೀರಿ..?
ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಜಿಎಫ್ ಬಾಬುಗೆ ಕಾಂಗ್ರೆಸ್ ಮಣೆ ಹಾಕಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ.. ಅಸಭ್ಯ ವರ್ತನೆ ತೋರಿದ್ದಕ್ಕಾಗಿ ತಮ್ಮನ್ನು ಬಂಧಿಸಿದ ಸಿಸಿಬಿ ಕಚೇರಿಯನ್ನೇ ಮುಚ್ಚಿಸುತ್ತೇನೆ ಎಂದು ಕಾಂಗ್ರೆಸ್ ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಚುನಾವಣೆಯಲ್ಲಿ ಗೆದ್ದರೆ ಭಾರತೀಯ ದಂಡ ಸಂಹಿತೆಯನ್ನೇ ರದ್ದು ಮಾಡುತ್ತೇನೆಂದು ಹೇಳಬಹುದು. ಡಿಕೆಶಿ ಅವರೇ ಎಷ್ಟು ಕೋಟಿಗೆ ಸೀಟ್ ಡೀಲ್ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದೆ.
ಡಿಕೆಶಿ ಅವರೇ, ನಿಮ್ಮ ನೆಚ್ಚಿನ ಅಭ್ಯರ್ಥಿಯ ಅರ್ಹತೆ ನೋಡಿ. ಒಂದೊಮ್ಮೆ ಚುನಾವಣೆಯಲ್ಲಿ ಗೆದ್ದರೆ ವಿಧಾನ ಪರಿಷತ್ತಿನಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತೀರಾ?
ಖರ್ಚು ಮಾಡುವ ಸಾಮಥ್ರ್ಯ ಇರುವವರಿಗೆ ಮಾತ್ರ ಟಿಕೆಟ್ ಎಂದು ನೀವು ಘೋಷಿಸಿದ ಮೇಲೆ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಸಿಗುತ್ತದೆಯೇ?
ಕೆಜಿಎಫ್ ಬಾಬು ಅವರು ಅಫಿಡವಿಟ್ನಲ್ಲಿ ಘೋಷಿಸಿದ್ದು 1700 ಕೋಟಿ, ಟಿವಿ ಮಾಧ್ಯಮದಲ್ಲಿ ಘೋಷಣೆ ಮಾಡಿದ್ದು 4000 ಕೋಟಿ.
ಖರ್ಚು ಮಾಡುವವರಿಗೆ ಮಾತ್ರ ಕಾಂಗ್ರೆಸ್ ಟಿಕೆಟ್ ಎಂದು ಡಿಕೆಶಿ ಘೋಷಿಸಿದ್ದಾರೆ.
ಡಿಕೆಶಿಯವರೇ, ಹಾಗಾದರೆ 224 ಕ್ಷೇತ್ರಗಳಿಗೂ ನಿಮ್ಮಂತೆ ಅಕ್ರಮದಿಂದ ಕುಬೇರರಾದವರನ್ನೇ ಅಭ್ಯರ್ಥಿಗಳನ್ನಾಗಿ ಮಾಡುತ್ತೀರಾ ಎಂದು ಕುಟುಕಿದೆ.