ಜನವರಿ 10ರಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ, ಜ.10, 11, 12ರಂದು ವೈಕುಂಠ ದ್ವಾರ ದರ್ಶನಕ್ಕೆ ಟಿಟಿಡಿ ವ್ಯವಸ್ಥೆ ಮಾಡಿದೆ. ಮೂರು ದಿನಗಳಿಗಾಗಿ ಒಟ್ಟು 1.20 ಲಕ್ಷ ಟೋಕನ್‌ಗಳನ್ನು ಗುರುವಾರ ವಿತರಿಸಲು ಟಿಟಿಡಿ ಯೋಜಿಸಿತ್ತು.ಆದರೆ, ಟೋಕನ್‌ಗಳಿಗಾಗಿ ಬುಧವಾರ ಸಂಜೆಯೇ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ವೈಕುಂಠ ದರ್ಶನದ ಟೋಕನ್ ಪಡೆಯಲು ಬಂದ ಭಕ್ತರನ್ನು ಪದ್ಮಾವತಿ ಉದ್ಯಾನದಲ್ಲಿ ಇರಿಸಲಾಗಿತ್ತು. ಅಷ್ಟರಲ್ಲಿ ಮಹಿಳೆಯೊಬ್ಬರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಗೇಟ್ ತೆರೆಯಲಾಯಿತು. ಟೋಕನ್ ನೀಡಲು ಗೇಟ್ ತೆರೆಯಲಾಗಿದೆ ಎಂದು ಭಾವಿಸಿದ ಭಕ್ತರು ಏಕಾಏಕಿ ನುಗ್ಗಿದರು. ಇದರಿಂದ ಕಾಲ್ತುಳಿತ ಉಂಟಾಯಿತು. ಅಲ್ಲದೆ ಅಲ್ಲಿನ ಭದ್ರತಾ ಸಿಬ್ಬಂದಿಯ ಓವರ್ ಆಕ್ಷನ್ ಸಹ ಕಾಲ್ತುಳಿತಕ್ಕೆ ಕಾರಣ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.
ಕಾಲ್ತುಳಿತ ಸಂಭವಿಸಿರುವುದು ದುರಾದೃಷ್ಟಕರ ಘಟನೆಯಾಗಿದೆ. ದುರಂತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಒಬ್ಬರನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ. ಸಿಎಂ ಚಂದ್ರಬಾಬು ನಾಯ್ಡು ಅವರು ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಂದು ಬೆಳಗ್ಗೆ 11.45ಕ್ಕೆ ಮೃತರ ಕುಟುಂಬಗಳನ್ನು ಭೇಟಿ ಮಾಡಲಿದ್ದಾರೆ. ಇಂತಹ ಘಟನೆಗಳು ಪುನರಾವರ್ತನೆ ಆಗಬಾರದು. ದುರಂತದ ಬಗ್ಗೆ ಪರಿಶೀಲಿಸುತ್ತಿದ್ದೇವೆ’ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ:
‘ಆಂಧ್ರಪ್ರದೇಶದ ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತದಿಂದ ನೋವಾಗಿದೆ. ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಆಂಧ್ರಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಎಕ್ಸ್’ ಮೂಲಕ ತಿಳಿಸಿದ್ದಾರೆ.