ಹಿಂದಿನ ವರ್ಷದಲ್ಲಿ ಉಂಟಾಗಿದ್ದ ಪ್ರವಾಹ ಹಾಗೂ ನೆಟೆ ರೋಗದಿಂದಾಗಿ ತೊಗರಿಯ ಇಳುವರಿ ಕಡೆಮೆಯಾಗಿತ್ತು. ಈಗ ಸಹಜವಾಗಿ ತೊಗರಿ ದರ ಸರ್ಕಾಲಿಕ ಏರಿಕೆ ಕಂಡಿದೆ. ಬೆಲೆ ಏರಿಕೆಯ ಲಾಭ ರೈತರಿಗೆ ಸಿಕ್ಕಿಲ್ಲ ಮತ್ತು ಗ್ರಾಹಕರಿಗೂ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಲಬುರಗಿಯ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗರಿಷ್ಠ 12,140 ರೂ. ದರ ತಲುಪಿದೆ. ಈ ತಿಂಗಳ ಆರಂಭದಲ್ಲಿ 10 ಸಾವಿರ ರೂ. ಇದ್ದ ದರ ಈಗ ದಿಢೀರ್ನೇ 12 ಸಾವಿರ ರೂ. ಗಡಿ ದಾಟಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಗ್ರಾಹಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸಕ್ತ ಮುಂಗಾರಿಗೆ 5.82 ಲಕ್ಷ ಹೆಕ್ಟೇರ್ನಲ್ಲಿ ತೊಗರಿ ಬಿತ್ತನೆಯಾಗಿದೆ. ಆದರೆ ಕಳೆದ 15 ದಿನಗಳಿಂದ ಮಳೆ ಬಾರದಿರುವುದರಿಂದಾಗಿ ರೈತರು ಮತ್ತಷ್ಟು ಕಂಗಾಲಾಗಿದ್ದರೆ, ಇತ್ತ ಮಾರುಕಟ್ಟೆಯಲ್ಲಿ ತೊಗರಿ ಗಗನಕ್ಕೆ ಏರಿಕೆ ಕಾಣುತ್ತಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ತೊಗರಿ ಕೆಜಿಗೆ 120 ರೂ. ಇದ್ದರೆ, ಈಗ 165 ರೂ.ಗಳಿಗೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಈಗ ತೊಗರಿ ಸ್ಟಾಕ್ ಇಲ್ಲ. ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲ.