ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಸಿಎಂ ಮತ್ತು ಡಿಸಿಎಂ ನಡುವಿನ ಆಂತರಿಕ ಸಂಘರ್ಷ ಚರ್ಚೆಯ ಕೇಂದ್ರಬಿಂದು ಆಗಿದೆ. ಈ ಬಾರಿ ಅಧಿಕಾರಿಗಳ ವರ್ಗಾವಣೆ ಕುರಿತು. ಇಲಾಖಾ ಮಟ್ಟದಲ್ಲಿ ನಡೆದಿರುವ ವರ್ಗಾವಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪವಾಗಿದೆ ಎಂಬ ಕಾರಣಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅಸಹನೆ ವ್ಯಕ್ತಪಡಿಸಿದ್ದು, ನೇರವಾಗಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ತಮ್ಮ ಇಲಾಖೆಯಲ್ಲಿ ತಮ್ಮ ಒಪ್ಪಿಗೆ ಇಲ್ಲದೇ ನಿರ್ಧಾರಗಳಾಗುತ್ತಿರುವುದು, ಅಧಿಕಾರಿಗಳನ್ನು ವರ್ಗಾಯಿಸುವಂತೆ ಸಿಎಂ ಕಚೇರಿಯಿಂದ ನೇರ ಸೂಚನೆಗಳು ಬರುತ್ತಿರುವುದು ಡಿಕೆಶಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸುತ್ತಿವೆ. ಇದರ ವಿರುದ್ಧ ತಕ್ಷಣ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಮುಂಚೆಯೂ ಕೆಲ ಯೋಜನೆಗಳ ಬಗ್ಗೆ ಭಿನ್ನಾಭಿಪ್ರಾಯಗಳು ಉಂಟಾದ ಅನುಭವವಿದೆ. ಇದೀಗ ವರ್ಗಾವಣೆಯ ವಿಚಾರದಲ್ಲಿ ಮತ್ತೆ ಸಂಘರ್ಷವೇ ಉಂಟಾಗಿ, ಕಾಂಗ್ರೆಸ್ ಪಾಳಯದಲ್ಲೇ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವರ್ಗಾವಣೆಯ ವಿಷಯದಲ್ಲಿ ಉಂಟಾದ ಗೊಂದಲವು ಸಿಎಂ-ಡಿಸಿಎಂ ನಡುವಿನ ಸಂವಹನದಲ್ಲಿ ಬಿರುಕು ಮೂಡಿಸಿದೆ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್ ಇದನ್ನು ಹೇಗೆ ಸಮಾಧಾನಪಡಿಸುತ್ತದೆ ಎಂಬುದು ಕುತೂಹಲದ ವಿಷಯವಾಗಿದೆ.