ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ 19ರ ಚೈನ್ ಲಿಂಕ್ ತುಂಡಾಗಿರುವ (TB Dam Gate Broken) ಹಿನ್ನೆಲೆಯಲ್ಲಿ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಸುಮಾರು 30ಕ್ಕೂ ಅಧಿಕ ಗ್ರಾಮಗಳ ಜನರಿಗೆ ಪ್ರವಾಹದ ಭೀತಿ ಶುರುವಾಗಿದೆ.
ಗೇಟ್ ನ ಚೈನ್ ಲಿಂಕ್ ತುಂಡಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ 90 ಸಾವಿರಕ್ಕೂ ಅಧಿಕ ಕ್ಯುಸೆಕ್ಸ್ ನೀರನ್ನು ಹೊರ ಹರಿಸಲಾಗಿದೆ. ಮಧ್ಯಾಹ್ನವಾಗುವಷ್ಟರಲ್ಲಿ ವೇಳೆಗೆ ಸುಮಾರು 3 ಲಕ್ಷ ಕ್ಯುಸೆಕ್ ನೀರನ್ನು ಹೊರಹರಿಸುವ ಸಾಧ್ಯತೆಯಿದೆ ಎಂದು ಟಿಬಿ ಡ್ಯಾಂ ಮಂಡಳಿ (Tungabhadra Reservoir Board) ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಬಳ್ಳಾರಿ, ಕೊಪ್ಪಳ (Koppala), ರಾಯಚೂರು ಹಾಗೂ ವಿಜಯನಗರ ನಾಲ್ಕು ಜಿಲ್ಲೆಗಳ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಲಾಗಿದೆ.
ವ್ಯಾಪಕ ಮಳೆಯಿಂದಾಗಿ ಮೊದಲೇ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಈ ಮಧ್ಯೆ ಡ್ಯಾಂನ ನೀರು ಹೀಗೆ ಹರಿಸಿದರೆ, ಸುಮಾರು 30ಕ್ಕೂ ಅಧಿಕ ಗ್ರಾಮಗಳಿಗೆ ನೀರು ನುಗ್ಗುವ ಆತಂಕ ಇದೆ. ನೀರು ಹರಿಯಲು ಬಿಟ್ಟರೆ 6 ಲಕ್ಷ ಹೆಕ್ಟೇರ್ ಗೂ ಅಧಿಕ ಬೆಳೆಗೆ ನೀರಿನ ಕೊರತೆಯಾಗುವ ಸಾಧ್ಯತೆಯಿದೆ. ಇಷ್ಟೊಂದು ನೀರು ಹೊರ ಹೋದರೆ ಒಂದು ಬೆಳೆಗೂ ನೀರು ಸಾಕಾಗಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಜಲಕ್ಷಾಮ ತಲೆದೋರಿದರೆ ಆಶ್ಚರ್ಯ ಪಡಬೇಕಿಲ್ಲ.